ಬೆಂಗಳೂರು : ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ಮನಕಲಕುವ ದುರಂತವೊಂದು ಸಂಭವಿಸಿದ್ದು, ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪುರದಲ್ಲಿ ಕೂಲಿ ಕಾರ್ಮಿಕರು ವಾಸವಿದ್ದ ತಾತ್ಕಾಲಿಕ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅಗ್ನಿ ಅವಘಡದಲ್ಲಿ ಮೃತಪಟ್ಟ ಮಕ್ಕಳನ್ನು ಐದು ವರ್ಷದ ಅರ್ಜುನ್ ಮತ್ತು ಮೂರು ವರ್ಷದ ಆಶಾ ಎಂದು ಗುರುತಿಸಲಾಗಿದೆ. ಮೂಲತಃ ರಾಯಚೂರು ಜಿಲ್ಲೆಯವರಾದ ಈ ಮಕ್ಕಳು, ಪೋಷಕರೊಂದಿಗೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಸೋಮವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದು, ಒಂದು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರೆ, ಮತ್ತೊಂದು ಮಗು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದೆ.
ರಾಯಚೂರು ಮೂಲದ ದಂಪತಿ ಕಳೆದ ಆರು ತಿಂಗಳಿಂದ ನಾರಾಯಣಪುರದ ಈ ಶೆಡ್‌ಗಳಲ್ಲಿ ವಾಸವಾಗಿದ್ದರು. ಪೋಷಕರು ಕೆಲಸಕ್ಕೆ ತೆರಳುವಾಗ ಇಬ್ಬರು ಮಕ್ಕಳನ್ನು ಅಜ್ಜಿಯ ಸುಪರ್ದಿಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು.
ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಅಜ್ಜಿಯ ಹೊರಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಅಜ್ಜಿ ವಾಪಸ್ ಬರುವಷ್ಟರಲ್ಲಿ ಇಡೀ ಶೆಡ್ ಬೆಂಕಿಯ ಕೆನ್ನಾಲಗೆಗೆ ತುತ್ತಾಗಿತ್ತು. ಸ್ಥಳೀಯರು ಪ್ರಯತ್ನಿಸಿದರೂ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ