ಮುಂಬೈ: ಬಾಲಿವುಡ್ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಸಂದೇಶವೊಂದು ಬಂದಿದ್ದು, ದುಷ್ಕರ್ಮಿಗಳು ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಬೆನ್ನಲ್ಲೇ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಮಂಗಳವಾರ (ಫೆಬ್ರವರಿ 10) ರಣವೀರ್ ಸಿಂಗ್ ಅವರ ವಾಟ್ಸಾಪ್ಗೆ ವಾಯ್ಸ್ ನೋಟ್ (ಧ್ವನಿ ಸಂದೇಶ) ಮೂಲಕ ಈ ಬೆದರಿಕೆ ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ಗೆ ವಹಿಸಿದ್ದಾರೆ. ಸದ್ಯ ಪೊಲೀಸರು ಈ ಸಂದೇಶ ಕಳುಹಿಸಿದ ವ್ಯಕ್ತಿ ಯಾರು ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚುತ್ತಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಣವೀರ್ ಸಿಂಗ್ ಅವರ ನಿವಾಸದ ಹೊರಗೆ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ರಣವೀರ್ ಅಥವಾ ಅವರ ತಂಡದಿಂದ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವಾದರೂ, ಪೊಲೀಸರು ಸ್ವಯಂಪ್ರೇರಿತವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮುಂಬೈನ ಜುಹುವಿನಲ್ಲಿರುವ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿತ್ತು. ಈ ಘಟನೆಗೂ ರಣವೀರ್ ಸಿಂಗ್ಗೆ ಬಂದಿರುವ ಬೆದರಿಕೆಗೂ ಸಂಬಂಧವಿದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ