ಇ.ಡಿ. ಬಂಧಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಅರವಿಂದ ಕೇಜ್ರಿವಾಲ್

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ದೆಹಲಿ ಮುಖ್ಯಮಂತ್ರಿ (ಸಿಎಂ) ಅರವಿಂದ ಕೇಜ್ರಿವಾಲ್ ನಿರ್ಧರಿಸಿದ್ದಾರೆ.
ಕೇಜ್ರಿವಾಲ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಇ.ಡಿ. ಹಾಜರುಪಡಿಸಿದಾಗ ಅವರ ರಿಮಾಂಡ್‌ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣವನ್ನು ವಾದಿಸುವುದಾಗಿ ಕೇಜ್ರಿವಾಲ್ ಪರ ವಕೀಲ ಅಭಿಷೇಕ ಮನು ಸಿಂಘ್ವಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
“ರಿಮಾಂಡ್‌ ಪ್ರಕ್ರಿಯೆಯೊಂದಿಗೆ ಸಂಘರ್ಷವಾಗುತ್ತಿರುವುದರಿಂದ ನಾವು ಇಲ್ಲಿ ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ. ನಾವು ರಿಮಾಂಡ್ ವಿಚಾರವಾಗಿ ನಾವು (ವಿಚಾರಣಾ ನ್ಯಾಯಾಲಯದಲ್ಲಿ) ವಾದಿಸುತ್ತೇವೆ. ನಂತರವೇ ಇಲ್ಲಿಗೆ ಬರುತ್ತೇವೆ. ಮನವಿ ಹಿಂಪಡೆಯುವ ಬಗ್ಗೆ ನಾನು ರಿಜಿಸ್ಟ್ರಿಗೆ ಪತ್ರವನ್ನು ನೀಡುತ್ತೇನೆ” ಎಂದು ಸಿಂಘ್ವಿ ಹೇಳಿದರು. ನಂತರ ನ್ಯಾಯಾಲಯವು ಕೇಜ್ರಿವಾಲ್‌ ಮನವಿಗೆ ಅನುಮತಿಸಿತು.

ಗುರುವಾರ ರಾತ್ರಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ರಿಟ್ ಅರ್ಜಿಯ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೇಜ್ರಿವಾಲ್ ಅವರನ್ನು ಬಂಧಿಸಿದಂತೆ ಮಧ್ಯಂತರ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಈ ಹಿಂದೆ ನಿರಾಕರಿಸಿತ್ತು.
ನಂತರ ಕೇಜ್ರಿವಾಲ್‌ ಅವರ ನಿವಾಸದಲ್ಲಿ ಗುರುವಾರ ಶೋಧ ನಡೆಸಿದ ನಂತರ ಅಂದು ರಾತ್ರಿ ಇ.ಡಿ. ಅವರನ್ನು ಬಂಧಿಸಿತ್ತು. ನಂತರ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ ನಾಯಕಿ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಇದೇ ವಿಶೇಷ ನ್ಯಾಯಪೀಠ ಶುಕ್ರವಾರ ಬೆಳಗ್ಗೆ ಜಾಮೀನು ನಿರಾಕರಿಸಿದೆ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement