ಅನುದಾನ ಬಿಡುಗಡೆ: ಪಕ್ಷಭೇದ ಮರೆತು ಮರೆತು ವಿಧಾನ ಪರಿಷತ್ ಸದಸ್ಯರು ರಾಜ್ಯ ಸರ್ಕಾರದ ಮೇಲೆ ಗರಂ

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಸದಸ್ಯರು ಪಕ್ಷಭೇದ ಮರೆತು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರೂ ಸರ್ಕಾರದ ಮೇಲೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಏಕವ್ಯಕ್ತಿ ಸಂಪುಟದ ಸರ್ಕಾರ ರಾಜ್ಯದಲ್ಲಿದೆ. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ವ್ಯಕ್ತಪಡಿಸಿದ ಭಾವನೆಗಳು ನಿಜಕ್ಕೂ ಆಶ್ಚರ್ಯ ಮೂಡಿಸಿವೆ. ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೇರಿದ ಸದಸ್ಯರು ಮಾತ್ರವಲ್ಲ, ಬಿಜೆಪಿ ಸದಸ್ಯರೂ ಅದಕ್ಕೆ ದನಿಗೂಡಿಸಿದ್ದು ಗಮನ ಸೆಳೆಯಿತು.

ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ಮಂಜೂರಾಗುವ ಅನುದಾನ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರು ಸಿಡಿದೆದ್ದಿದ್ದಾರೆ. ಹೀಗಾಗಿ ಎಲ್ಲಾ ಪಕ್ಷಗಳ ಪರಿಷತ್ ಸದಸ್ಯರು ಸಭೆ ಸೇರಿ ಚರ್ಚೆ ನಡೆಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸಭೆ ನಡೆದಿರುವುದು ಮತ್ತೊಂದು ವಿಶೇಷ.

ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ಎಸ್. ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ನಾರಾಯಣಸ್ವಾಮಿ, ಹರೀಶ್ ಕುಮಾರ್, ವೀಣಾ ಅಚ್ಚಯ್ಯ, ಪ್ರಕಾಶ್ ರಾಥೋಡ್, ಆರ್. ಬಿ. ತಿಮ್ಮಾಪೂರ, ಎಸ್. ರವಿ, ಕೆ. ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಬಿಜೆಪಿಯ ಎನ್. ರವಿಕುಮಾರ್, ಶಾಂತಾರಾಂ ಸಿದ್ದಿ, ಪ್ರಾಣೇಶ್ ಹಾಗೂ ಜೆಡಿಎಸ್ ಪಕ್ಷದ ತಿಪ್ಪೇಸ್ವಾಮಿ, ಅಪ್ಪಾಜಿಗೌಡ, ಕಾಂತರಾಜು ಸೇರಿ‌ದಂತೆ ಹಲವು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ವಿಧಾನ ಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮಂಗಳವಾರ ಸಭೆ ಸೇರಿದ್ದ ವಿದಾನ ಪರಿಷತ್‌ ಸದಸ್ಯರು ಸರ್ಕಾರದ ಮೇಲೆ ಆರೋಪಗಳ ಸುರಿಮಳೆ ಮಾಡಿದರು.

ನಮ್ಮ ಮಾನ ಮರ್ಯಾದೆ ಯಾಕೆ‌ ಕಳೆಯುತ್ತೀರಿ?
ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್. ರವಿ ಕುಮಾರ್ ಮಾತನಾಡಿ, “ಅನುದಾನದ ವಿಚಾರದಲ್ಲಿ ವಿಧಾನಸಭೆ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ತಾರತಮ್ಯವಿದೆ. ಪರಿಷತ್ ಸದಸ್ಯರ ಅನುದಾನಕ್ಕೆ ಕತ್ತರಿ ಹಾಕುವುದು ಸರಿಯಲ್ಲ. ವಿಧಾನ ಪರಿಷತ್ ಕ್ಷೇತ್ರ ವ್ಯಾಪ್ತಿ ಬಹಳ ದೊಡ್ಡದಿರುತ್ತದೆ. ಹೀಗಾಗಿ ಅನುದಾನವನ್ನು ಪ್ರತ್ಯೇಕವಾಗಿಡಬೇಕು. ಅನುದಾನದಲ್ಲಿ ಹಣಕ್ಕೆ ಕತ್ತರಿ ಹಾಕದೆ ಸಂಪೂರ್ಣ ಹಣ ಮಂಜೂರು ಮಾಡಬೇಕು” ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯರ ಪ್ರಶ್ನೆಗಳಿಗೆ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐಎನ್‌ಎಸ್ ಪ್ರಸಾದ್ ಕೊಟ್ಟ ಸ್ಪಷ್ಟನೆ ಬಳಿಕ ಸದಸ್ಯರು ಮತ್ತಷ್ಟು ಗರಂ ಆದರು.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

ಅನುದಾನದ ತಾರತಮ್ಯವಾಗಿಲ್ಲ: ಐಎನ್‌ಎಸ್ ಪ್ರಸಾದ್
ಅನುದಾನದ ವಿಚಾರವಾಗಿ ನಡೆದ ವಿಧಾನ ಪರಿಷತ್ ಸದಸ್ಯರ ಸಭೆಗೆ ಆಗಮಿಸಿ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐಎನ್‌ಎಸ್ ಪ್ರಸಾದ್ ಸ್ಪಷ್ಟನೆ ನೀಡಿದರು. “ಆಯಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣವಿದೆ. ಯಾವುದೇ ಅನುದಾನದ ತಾರತಮ್ಯವಾಗಿಲ್ಲ. ಪ್ರತಿವರ್ಷ ವಿಧಾನ ಪರಿಷತ್ ಸದಸ್ಯರಿಗಾಗಿ 6೦೦ ಕೋಟಿ ರೂ. ಬಜೆಟ್‌ನಲ್ಲಿ ಕಾಯ್ದಿರಿಸಲಾಗುತ್ತದೆ. 2017ರಲ್ಲಿ ಅನುದಾನ ಖರ್ಚಾಗದೆ ಹಣ ಬಾಕಿ‌ ಉಳಿದಿತ್ತು. ಅದನ್ನು ವಾಪಸ್ ಪಡೆದು ಅಂಗನವಾಡಿಗಳಿಗೆ ಕೊಟ್ಟಿದ್ದೆವು. ಹಣ ಬಳಕೆಯಾದರೆ ಕೊಡಲು ನಾವು ಸಿದ್ಧವಾಗಿದ್ದೇವೆ. ಬೇರೆ ಬೇರೆ ಕಾರಣಗಳಿಂದ ಕೆಲಸಗಳು ಆಗುತ್ತಿಲ್ಲ. ಕೇವಲ ಪರಿಷತ್ ಸದಸ್ಯರು ಮಾತ್ರವಲ್ಲ, ಶಾಸಕರ ಪ್ರಾದೇಶಾಭಿವೃದ್ಧಿ ನಿಧಿಯಿಂದಲೂ ಕೆಲಸಗಳು ಆಗುತ್ತಿಲ್ಲ. ಹಣ ಖರ್ಚು ಮಾಡಿದರೆ ಕೊಡಬಹುದು. ಕಾಮಗಾರಿ ಮುಗಿಯಲ್ಲ, ಹಣ ಬಾಕಿ‌ ಉಳಿದಿದೆ” ಎಂದು ಅವರು ಹೇಳಿದರು. ಅವರ ಮಾತಿನಿಂದ ವಿಧಾನ ಪರಿಷತ್ ಸದಸ್ಯರು ಮತ್ತಷ್ಟು ಗರಂ ಆದರು.
ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳ ಮಾತಿಗೆ ಉತ್ತರಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, “ನನಗೆ ಬಿಡುಗಡೆ ಆಗಬೇಕಿದ್ದ ಅನುದಾನ ಕಳೆದ 2018-19ರಲ್ಲಿ 39 ಲಕ್ಷ ರೂ. ಬಾಕಿ ಉಳಿದಿದೆ. 2019-20ರಲ್ಲಿ 29 ಲಕ್ಷ ರೂ. ಬಾಕಿ ಉಳಿದಿದ್ದು, 2020-21 ರಲ್ಲಿ 12 ಲಕ್ಷ ರೂ. ಬಾಕಿ‌ ಉಳಿದಿದೆ. ಈ ಬಾಕಿ ಬಿಡುಗಡೆಗೆ ಸಮಸ್ಯೆ ಏನಿತ್ತು ಎಂದು ಪ್ರಶ್ನಿಸಿದರು.
“2 ಕೋಟಿ ರೂ. ಅನುದಾನ ಮಂಜೂರು ಮಾಡಲು ಕಾಮಗಾರಿ ಪಟ್ಟಿ ಕೊಡಿ ಎಂದು ನಿಯಮ ಹಾಕುತ್ತೀರಿ. ಹೀಗಾಗಿ ನಮ್ಮ ಮತ ಕ್ಷೇತ್ರದಲ್ಲಿನ ಕಾಮಗಾರಿಗಳ ಪಟ್ಟಿ ಕೊಟ್ಟಿದ್ದೇನೆ. ಜೊತೆಗೆ ಜಿಲ್ಲಾಧಿಕಾರಿಗಳಿಗೂ ದಾಖಲೆ ಕೊಟ್ಟಿದ್ದೇವೆ. ಆದರೂ ನಮ್ಮ‌ ಅನುದಾನ ನಮಗೆ ಬಿಡುಗಡೆ ಆಗಲಿಲ್ಲ ಯಾಕೆ..? ಕ್ಷೇತ್ರದಲ್ಲಿ ನಮ್ಮ‌ ಮಾನ-ಮರ್ಯಾದೆ ಹಾಳಾಗಿ ಹೋಗಿದೆ. ನಾವು ಕೆಲಸ ಮಾಡೋದು ಹೇಗೆ? ಎಂದು ಎಸ್.ಆರ್. ಪಾಟೀಲ್ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಮರು ಪ್ರಶ್ನೆ ಮಾಡಿದರು.

ಜಿಲ್ಲಾಧಿಕಾರಿಗಳು ನಮಗೆ ನಿರ್ದೇಶನ ಕೊಡುತ್ತಾರೆ!

ವಿಧಾನ ಪರಿಷತ್ ಸದಸ್ಯರು ಅನುದಾನ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ತಿರುಗೇಟು ಕೊಟ್ಟರು. “ನಾವು ಕಾಮಗಾರಿ ಪಟ್ಟಿ ಕೊಟ್ಟಿದ್ದೇವೆ. ಆದರೆ ಜಿಲ್ಲಾಧಿಕಾರಿಗಳು ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾದಲ್ಲಿ ನಾವು ಯಾರನ್ನು ಕೇಳಬೇಕು? ನಾನು ಮೂರು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯ. ವಿಪರ್ಯಾಸ ಎಂದರೆ, ಬಯಲು ಸೀಮೆಯಲ್ಲಿ ನನ್ನ‌ ಹೆಸರೇ ಇಲ್ಲ. ಜಿಲ್ಲಾಧಿಕಾರಿಗಳಿಗೆ ಕಾಮಗಾರಿ ವಿವರ ಕೊಡುತ್ತೇವೆ. ಆದರೆ ಒಟ್ಟು 50 ಲಕ್ಷ ರೂ.ಗಳ ಕಾಮಗಾರಿ ಮಾಡಿಸಿದರೆ 38 ಲಕ್ಷ ರೂ. ಬಿಡುಗಡೆ ಮಾಡುತ್ತೀರಿ. ಉಳಿದ 12 ಲಕ್ಷ ರೂ. ಹಣ ಕೊಡೋದೇ ಇಲ್ಲ. ಆ 12 ಲಕ್ಷ ರೂ. ಹಣ ಎಲ್ಲಿಗೆ ಹೋಗುತ್ತದೆ? ಜೊತೆಗೆ ಇಂಥದ್ದಕ್ಕೇ ಅನುದಾನವನ್ನು ಖರ್ಚು ಮಾಡಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ಕೊಡುತ್ತಾರೆ. ನಾವು ಪರಿಷತ್ ಸದಸ್ಯರು, ನಮಗೆ ನಿರ್ದೇಶನ ಕೊಟ್ಟರೆ ಹೇಗೆ? ಹಾಗೆ ನಿರ್ದೇಶನ ಕೊಡುವುದನ್ನು ಮೊದಲು ನಿಲ್ಲಿಸಿ” ಎಂದು ಆಗ್ರಹಿಸಿದರು.
ಜೊತೆಗೆ 2019-20 ರಲ್ಲಿ ಬಿಡುಗಡೆ ಆಗಬೇಕಿದ್ದ ಅನುದಾನದಲ್ಲಿ 56 ಲಕ್ಷ ರೂ. ಪೆಂಡಿಂಗ್ ಇದೆ. 2020-21 ರಲ್ಲಿ 1 ಕೋಟಿ ಕಾಮಗಾರಿಗೆ ಬಿಲ್ ಮಾಡಿಲ್ಲ. ನಾವು ಕಾಮಗಾರಿ ಮಾಡಿ ಮುಗಿಸಿದ್ದೇವೆ. ಆದರೂ ಅನುದಾನ ಬಿಡುಗಡೆ ಮಾಡಿಲ್ಲ ಅಂದರೆ ಹೇಗೆ ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆ ಮಾಡಿದರು.
ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಶ್ವನಾಥ್
ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ , “ನಮಗೆ ಬರುವ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಸರ್ಕಾರದಿಂದ ಅನುದಾನ ಬರುತ್ತದೆ. ಆ ಅನುದಾನದಲ್ಲಿ 22 ಪರ್ಸೆಂಟ್ ಕೊಡಿ ಅಂದರೆ ಹೇಗೆ? ಟೆಂಡರ್ ಕರೆದು ಮಾಡಿದರೆ 32 ಪರ್ಸೆಂಟ್ ಕಟ್ ಆಗುತ್ತದೆ. ಅನುಮತಿ ಕೊಡಬೇಕು, ವಿವರಣೆ ಕೊಡಬೇಕು. ಇದೆಲ್ಲದಕ್ಕೂ ಪರ್ಸೆಂಟ್ ಕಟ್ ಆದರೆ ಕಾಮಗಾರಿ ಮಾಡುವುದು ಹೇಗೆ? ಬಜೆಟ್‌ನಲ್ಲಿ ಒಟ್ಟು 600 ಕೋಟಿ ರೂ. ಅನುದಾನ ನಮಗೆ ಇಟ್ಟಿದ್ದೀರಿ. ನಮಗೆ ಟೆಂಡರ್‌ನಿಂದ ವಿನಾಯಿತಿ ಕೊಡಿ. ಗುಂಡಿ ಹೊಡೆಯೋದು ನಮ್ಮ ಪ್ರಯಾರಿಟಿ ಅಲ್ಲ. ಅಕ್ಷರ, ಆರೋಗ್ಯ ನಮ್ಮ‌ ಪ್ರಯಾರಿಟಿ. ಅದರ ಬಗ್ಗೆ ಗಮನ ಹರಿಸಬೇಕು. ಹೀಗಾಗಿ ಇದಕ್ಕೆ ಒಂದು ಸಮಿತಿ ರಚನೆ ಮಾಡಿ. ನಂತರ ಮುಖ್ಯಮಂತ್ರಿಗಳಿಗೆ ಒಂದು ವರದಿ ಕೊಡಿ. ನಮ್ಮ ಸಮಸ್ಯೆಯನ್ನ ಸರಿಪಡಿಸಿ ಎಂದು ತರಾಟೆಗೆ ತೆಗೆದುಕೊಂಡರು.
ಒಟ್ಟಾರೆ ಅನುದಾನ ತಾರತಮ್ಯ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂಬ ಆರೋಪವನ್ನು ಎಲ್ಲ ಸದಸ್ಯರು ಮಾಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಒಟ್ಟು 75 ಸದಸ್ಯರಿದ್ದಾರೆ. ಹೀಗಾಗಿ ನಾಮಕಾವಾಸ್ತೆ ನಮಗೆ ಅನುದಾನ ಬೇಡ. ನಾವೂ ಜನರ ಸೇವೆ ಮಾಡುವುದಕ್ಕೆ ಅನುವಾಗುವಂತೆ ಸರಿಯಾಗಿ ಅನುದಾನ ಬಿಡುಗಡೆ ಮಾಡಿ ಎಂದು ಸದಸ್ಯರು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement