ಕೋವಿಡ್ ಚಿಕಿತ್ಸಾ ವೆಚ್ಚ ಕಡಿಮೆ ಮಾಡಲು ಖಾಸಗಿ ಆಸ್ಪತ್ರೆಗಳೊಂದಿಗೆ ಚರ್ಚೆ

ಹುಬ್ಬಳ್ಳಿ: ಧಾರವಾಡದ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗೆ ಕೊವೀಡ್ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಶೇ.50 ರಷ್ಟು ಕಡಿಮೆ ಮಾಡುವಂತೆ ಕೋರಲಾಗುವುದು. ಈ ಕುರಿತು ಎಸ್.ಡಿ.ಎಂ. ನ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ಬಳಿ ಜಿಲ್ಲಾಡಳಿತದಿಂದ ಆರಂಭಿಸಲಾಗಿರುವ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ತಂತ್ರಾಂಶ ಆಧರಿಸಿದ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ವಿಜಯಪುರದ ಎಂ.ಬಿ.ಪಾಟೀಲರ ಬಿ.ಎಲ್.ಡಿ. ಸಂಸ್ಥೆಯ ಆಸ್ಪತ್ರೆಗಳಲ್ಲಿ ಕೊವೀಡ್ ಚಿಕಿತ್ಸಾ ವೆಚ್ಚ ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ರೀತಿ ಧಾರವಾಡ ಜಿಲ್ಲೆಯ ಎಸ್ಡಿಎಂ, ಸುಚಿರಾಯುದಂತಹ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಕಡಿಮೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.
ಕೋವಿಡ್ ಎರಡನೇ ಅಲೆಯಲ್ಲಿ ಕಾಣಿಸಕೊಂಡಿರುವ ರೂಪಾಂತರಿ ವೈರಸ್ ಬಹಳ ಗಂಭೀರ ಸ್ವರೂಪದ್ದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿವೆ. ದೇಶದ ಪ್ರಮುಖ ವೈದ್ಯರೊಂದಿಗೆ ಚರ್ಚಿಸಿದ್ದೇನೆ. ಕೋವಿಡ್ ರೋಗಿಗಳಿಗೆ ರೆಮ್ಡಿಸಿವಿರ್ ಒಂದೇ ಮದ್ದಲ್ಲ. ಆದರೆ ಈ ಬಗ್ಗೆ ಜನರಲ್ಲಿ ಆತಂಕ ಮೂಡಿಸಲಾಗುತ್ತಿದೆ.
ಭಾರತ ಸರ್ಕಾರದಿಂದ ಎಲ್ಲಾ ರಾಜ್ಯಗಳಿಗೂ ಅಗತ್ಯ ನೆರವು ಒದಗಿಸಲಾಗುವುದು. ಕೆಲವು ನಗರಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ. ಈ ನಗರಗಳಿಗೆ ವಿಶೇಷ ರೈಲು ಹಾಗೂ ವಿಮಾನಗಳ ಮೂಲಕ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದೆ. ರಾಜ್ಯ ಗಳಿಗೆ ನೀಡುತ್ತಿದ್ದ ಆಕ್ಸಿಜನ್ ಸರಬರಾಜು ಪ್ರಮಾಣವನ್ನು ಹೆಚ್ಚು ಮಾಡಲಾಗಿದೆ‌. ಕೇಂದ್ರ ಸರ್ಕಾರದಿಂದ ದೇಶದ 80 ಲಕ್ಷ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚು ಮಾಡಲಾಗುತ್ತಿದೆ. ಧಾರವಾಡ ನಗರದ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಪೂರ್ಣಗೊಂಡಿದೆ. ಅಲ್ಲಿಯೂ ಬೆಡ್ ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಮುಖ ಸುದ್ದಿ :-   ಹಿಂಗಾರು ಮಳೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement