ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣ: ಕೆ.ಎಸ್. ಈಶ್ವರಪ್ಪ ನಿರಾಳ

ಬೆಂಗಳೂರು : ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.​ ಈಶ್ವರಪ್ಪ ಅವರ ಮೇಲೆ ಮಾಡಲಾಗಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲವೆಂದು ಉಡುಪಿ ಪೊಲೀಸರು ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್​​ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯವು ಅಂಗೀಕರಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಎಸ್‌. ಈಶ್ವರಪ್ಪ ಅವರು ಗ್ರಾಮೀಣ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವರಾಗಿದ್ದಾಗ 2022ರ ಏಪ್ರಿಲ್ 12 ರಂದು ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಗುತ್ತಿಗೆದಾರ ಕಮೀಷನ್‌ ಹಣದ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೆ.ಎಸ್.​​ ಈಶ್ವರಪ್ಪ ಅವರ ವಿರುದ್ಧ ಆರೋಪ ಮಾಡಲಾಗಿತ್ತು. ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿ ಕೊನೆಗೆ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೂ ರಾಜಿನಾಮೆ ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಉಡುಪಿ ಪೊಲೀಸರು ಈಶ್ವರಪ್ಪ ಅವರ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲವೆಂದು ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು. ಈ ಬಿ ರಿಪೋರ್ಟ್ ಸಲ್ಲಿಕೆಯನ್ನು ಪ್ರಶ್ನಿಸಿ ಮೃತ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಸಹೋದರ ಪ್ರಶಾಂತ್‌ ಪಾಟೀಲ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ​ ವಾದ-ಪ್ರತಿವಾದ ಆಲಿಸಿದ ನಂತರ ಬಿ ರಿಪೋರ್ಟ್ ಅಂಗೀಕರಿಸಿದೆ. ಈ ಮೂಲಕ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್‌ ಈಶ್ವರಪ್ಪ ಅವರಿಗೆ ಕ್ಲೀನ್‌ ಚೀಟ್‌ ಸಿಕ್ಕಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement