13352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಸರ್ಕಾರಕ್ಕೆ ಹೈಕೋರ್ಟ್‌ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ 13,352 ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ಗ್ರೀನ್‌ ಸಿಗ್ನಲ್‌ ನೀಡಿದೆ.
ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂಬಂಧ 2022ರ ನವೆಂಬರ್‌ 18ರಂದು ಪ್ರಕಟಿಸಿದ್ದ 1:1 ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠ ರದ್ದುಪಡಿಸಿದೆ.
ರಾಜ್ಯ ಸರ್ಕಾರವು 2023ರ ಜೂನ್‌ 8ರಂದು ಸಿದ್ಧಪಡಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 13,352 ಮಂದಿ ಆಯ್ಕೆ ಅಭ್ಯರ್ಥಿಗಳಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು ಎಂದು ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ರಾಜ್ಯದಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಭರ್ತಿ ಮಾಡಲು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅಗತ್ಯತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿ ಪರಿಗಣಿಸಿ, 2023ರ ಜೂನ್‌ 8ರಂದು ಸಿದ್ಧಪಡಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಾರ 13,352 ಮಂದಿ ಆಯ್ಕೆಯಾದ ಅಭ್ಯರ್ಥಿಗಳಿಂದ ಶಿಕ್ಷಕರನ್ನು ನೇಮಕಾತಿ ಆಯ್ಕೆಯನ್ನು ರಾಜ್ಯ ಸರ್ಕಾರ ಮಾಡಬಹುದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ವರದಿ ಪ್ರಕಾರ, ನೇಮಕಾತಿಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿದವರ ಆಯ್ಕೆ ಅಂತಿಮಗೊಳಿಸಬಹುದಾಗಿದೆ. ಆದರೆ, ಸರ್ಕಾರದ ಅಧಿಸೂಚನೆಯಲ್ಲಿ ಹೇಳಿದಂತೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ. ನೊಂದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆ ಅರ್ಜಿ ದಾವೆ ಇತ್ಯರ್ಥವಾಗುವವರೆಗೆ ವಿವಾದಿತ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ಹಾಗೆಯೇ, 2023ರ ಜೂನ್‌ 8ರಂದು ಪ್ರಕಟಿಸಿದ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ 451 ಅಭ್ಯರ್ಥಿಗಳನ್ನು ಹೊರಗಿಡಲಾಗಿದೆ. ಅದು ಕೇವಲ ಅರ್ಹತೆಯ ಆಧಾರದ ಮೇಲೆ 451 ಅಭ್ಯರ್ಥಿಗಳ ಹೆಸರನ್ನು ಹೊರಗಿಡಲಾಗಿದೆ ಎಂದು ಹೇಳಲಾಗಿದೆ. ಅದರಂತೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒದಗಿಸದ ಅಭ್ಯರ್ಥಿಗಳ ಅರ್ಹತೆ ಅಮಾನ್ಯವಾಗಲಿದೆ. ಅಂತಹ ಹುದ್ದೆಗಳನ್ನು ಅರ್ಹತೆಯ ಮೇಲೆ ಹೊರಗಿಡಲಾದ ಅಭ್ಯರ್ಥಿಗಳು ಮತ್ತು ನಿಗದಿತ ನಮೂನೆಯಲ್ಲಿ ಜಾತಿ-ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಂದ ಭರ್ತಿ ಮಾಡಬಹುದು. ಪ್ರಸ್ತುತ ವ್ಯಾಜ್ಯದಿಂದ ರಾಜ್ಯದಾದ್ಯಂತ 6 ರಿಂದ 8 ನೇ ತರಗತಿಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇಂತಹ ವಿಚಿತ್ರವಾದ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿಬಂಧನೆಯೊಂದಿಗೆ ನೇಮಕ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಹಿಂದುಳಿದ ವರ್ಗದ ವಿವಾಹಿತ ಮಹಿಳೆಯನ್ನು ಆಯ್ಕೆಗೆ ಪರಿಗಣಿಸುವಾಗ ಪತಿಯ ಆದಾಯ ಪರಿಗಣನೆಗೆ ಸರ್ಕಾರ ನಿಯಮ ರೂಪಿಸಿತ್ತು. ರಾಜ್ಯ ಸರ್ಕಾರದ ಈ ನೀತಿಯನ್ನು ಏಕಸದಸ್ಯ ಪೀಠ ಅಮಾನ್ಯಗೊಳಿಸಿತ್ತು. ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಆಧರಿಸಲು ಸೂಚಿಸಿತ್ತು. ಇದೀಗ ಏಕಸದಸ್ಯ ಪೀಠದ ಈ ಆದೇಶ ರದ್ದುಪಡಿಸಿದ ಹೈಕೋರ್ಟ್, 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement