“ಅಮೇಥಿ ನನ್ನನ್ನು ಬಯಸಿದರೆ…”: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ ಗಾಂಧಿ ಕುಟುಂಬದ ಅಳಿಯ

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರು ತಮ್ಮ ರಾಜಕೀಯ ಪಾದಾರ್ಪಣೆಯ ಸುಳಿವು ನೀಡಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್‌ ಭದ್ರಕೋಟೆಯಾದ ಅಮೇಥಿಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಗುರುವಾರ “ನಾನು ಸಂಸದನಾಗಲು ಬಯಸಿದರೆ ನಾನು ಅವರನ್ನು ಪ್ರತಿನಿಧಿಸಬೇಕೆಂದು ಅಮೇಥಿಯ ಜನರು ನಿರೀಕ್ಷಿಸುತ್ತಾರೆ ಎಂದು ಹೇಳಿದ್ದಾರೆ.
ರಾಯಬರೇಲಿ, ಅಮೇಥಿ ಮತ್ತು ಸುಲ್ತಾನಪುರ ಕ್ಷೇತ್ರಗಳ ಅಭಿವೃದ್ಧಿಗೆ ಗಾಂಧಿ ಕುಟುಂಬ ಶ್ರಮಿಸಿದೆ. ಹಾಲಿ ಸಂಸದರಿಂದ ಅಮೇಥಿಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು (ಸ್ಮೃತಿ ಇರಾನಿ) ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ ಎಂದು ಪರಿತಪಿಸುತ್ತಿದ್ದಾರೆ ಎಂದು ವಾದ್ರಾ ಪ್ರತಿಕ್ರಿಯಿಸಿದ್ದಾರೆ. ಅಮೇಥಿಯ ಜನರಿಗೆ ತಾವು ತಪ್ಪು ಮಾಡಿದ್ದೇವೆ ಎಂದು ಅನಿಸಿದಾಗ, ಗಾಂಧಿ ಕುಟುಂಬ ಮರಳಿ ಬರಬೇಕು ಎಂದು ಅವರು ಬಯಸಿದಾಗ ಅಥವಾ ಅವರು ನನ್ನನ್ನು ಬಯಸಿದರೆ… ಆಗ ಕಾಂಗ್ರೆಸ್‌ಗೆ ದೊಡ್ಡ ಗೆಲುವು ಸಿಗಲಿದೆ ಎಂದು ಅವರು ಹೇಳಿದರು.

ಪ್ರಿಯಾಂಕಾ ಗಾಂಧಿ ಮೊದಲು ಸಂಸದರಾಗಬೇಕೆಂದು ಬಯಸುತ್ತೇನೆ. ಬಳಿಕ, ನಾನೂ ರಾಜಕೀಯಕ್ಕೆ ಬರಲು ಇಚ್ಛಿಸುತ್ತೇನೆ. ಜನರು ಮತ್ತು ವಿವಿಧ ಪಕ್ಷಗಳ ಸಂಸದರ ಜೊತೆ ಚರ್ಚೆ ನಡೆಸಿರುವೆ. ಅವರೆಲ್ಲ ಕಾಂಗ್ರೆಸ್‌ ಪಕ್ಷವನ್ನು ನಾನು ಪ್ರತಿನಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜಕೀಯಕ್ಕೆ ಬರಲು ಯಾಕೆ ವಿಳಂಬ ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದಾರೆ. ಅವರು ಬೆಂಬಲ ನೀಡುವ ಭರವಸೆ ಸಹ ಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 17 ರಲ್ಲಿ ಸ್ಪರ್ಧಿಸಲಿದೆ, ಉಳಿದ 63 ಇಂಡಿಯಾ ಮೈತ್ರಿಕೂಟದ ಮಿತ್ರ ಸಮಾಜವಾದಿ ಪಕ್ಷ ಮತ್ತು ಪ್ರಾದೇಶಿಕ ಪಕ್ಷಗಳು ಸ್ಪರ್ಧಿಸಲಿವೆ. ಪಕ್ಷವು ಇದುವರೆಗೆ 14 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷವು ಈವರೆಗೂ ಅಮೇಥಿ ಮತ್ತು ರಾಯ್ಬರೇಲಿಯ ಅಭ್ಯರ್ಥಿಗಳ ಬಗ್ಗೆ ಮೌನವಾಗಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದ್ದ ಅಮೇಥಿಯನ್ನು ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದರು. 2019ರಲ್ಲಿ ಸ್ಮೃತಿ ಇರಾನಿ ಎದುರು ಸೋಲು ಅನುಭವಿಸಿದ ಅವರು ಈ ಬಾರಿ ಕೇರಳದ ವಯನಾಡು ಕ್ಷೇತ್ರದಿಂದ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement