ಕೊಡಗು; ಕಾಡಾನೆ ದಾಳಿಗೆ ಬೆಂಗಳೂರು ಪ್ರವಾಸಿಗ ಸಾವು

ಮಡಿಕೇರಿ: ಕಾಡಾನೆ ದಾಳಿಗೆ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಮೃತಪಟ್ಟಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಾಡಾನೆ ದಾಳಿಯಿಂದ ಮೃತಪಟ್ಟವರನ್ನು ಸ್ಥಳೀಯ ಹೋಂ ಸ್ಟೇಗೆ ಆಗಮಿಸಿದ್ದ ಸುಮಾರು 40 ವರ್ಷದ ಮುರಳಿಕೃಷ್ಣ ಎಂಬ ಪ್ರವಾಸಿಗ ಎಂದು ಗುರುತಿಸಲಾಗಿದೆ. ಪ್ರವಾಸಿಗರು ತೆರಾಲು ಗ್ರಾಮದ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಸಂಜೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ನಾಯಿಯನ್ನು ಅಟ್ಟಿಸಿಕೊಂಡು ಬಂದ ಕಾಡಾನೆ ಒಮ್ಮೆಲೇ ಪ್ರವಾಸಿಗನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರವಾಸಿಗನನ್ನು ಸ್ಥಳೀಯರು ಆಸ್ಪತ್ರೆಗೆ ಒಯ್ದಿದ್ದಾರೆ. ಆದರೆ ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಘಟನೆಯಿಂದ ತೆರಾಲು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement