‘ದೇಶದ್ರೋಹಿ’-‘ದೇಶದ ಶತ್ರು’ ; ರಾಹುಲ್ ಗಾಂಧಿ, ಕೇಂದ್ರ ಸಚಿವರ ಮಧ್ಯೆ ಮಾತಿನ ಚಕಮಕಿ

ನವದೆಹಲಿ: ಗುರುವಾರ (ಜನವರಿ 4) ಬೆಳಿಗ್ಗೆ ಸಂಸತ್ತಿನ ಆವರಣದಲ್ಲಿ ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಧಿವೇಶನಕ್ಕೂ ಮುನ್ನ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ಮಾಜಿ ಕಾಂಗ್ರೆಸ್ ನಾಯಕರಾದ ಬಿಟ್ಟು ಅವರನ್ನು “ನನ್ನ ದೇಶದ್ರೋಹಿ ಗೆಳೆಯ” ಎಂದು ಕರೆದರು. ಇದಕ್ಕೆ ಪ್ರತಿಯಾಗಿ ಬಿಟ್ಟು ಅವರು ರಾಹುಲ್ ಗಾಂಧಿಯವರನ್ನು “ದೇಶದ ಶತ್ರು” (ದೇಶ್ ಕೆ ದುಷ್ಮನ್) ಎಂದು ಜರಿದರು.
ಮೂರು ಬಾರಿ ಸಂಸದರಾಗಿರುವ ಮತ್ತು ಪ್ರಸ್ತುತ ರೈಲ್ವೆ ರಾಜ್ಯ ಸಚಿವರಾಗಿರುವ ಬಿಟ್ಟು ಅವರು 2024 ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಏನಿದು ಘಟನೆ?
ಸಂಸತ್ತಿನ ಮಕರ ದ್ವಾರದ ಬಳಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಿಟ್ಟು ಅವರು ಅಲ್ಲಿಂದ ಹಾದು ಹೋಗುತ್ತಿದ್ದಾಗ, “ಇಲ್ಲೊಬ್ಬ ದೇಶದ್ರೋಹಿ ನಡೆದು ಹೋಗುತ್ತಿದ್ದಾನೆ. ಮುಖ ನೋಡಿ,” ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು. ನಂತರ ಹಸ್ತಲಾಘವ ಮಾಡಲು ಕೈ ಚಾಚಿದ ರಾಹುಲ್, “ಹಲೋ ಬ್ರದರ್, ನನ್ನ ದೇಶದ್ರೋಹಿ ಗೆಳೆಯನೇ. ಚಿಂತಿಸಬೇಡ, ನೀನು ಮತ್ತೆ (ಕಾಂಗ್ರೆಸ್‌ಗೆ) ವಾಪಸ್ ಬರುತ್ತೀಯಾ,” ಎಂದರು.
ಆದರೆ, ರಾಹುಲ್ ಗಾಂಧಿ ಅವರೊಂದಿಗೆ ಕೈ ಕುಲುಕಲು ನಿರಾಕರಿಸಿದ ಸಚಿವ ಬಿಟ್ಟು, “ದೇಶದ ಶತ್ರು” ಎಂದು ಪ್ರತಿಕ್ರಿಯಿಸಿದರು.  ಪ್ರತಿಭಟನಾ ನಿರತ ಸಂಸದರನ್ನು ಉದ್ದೇಶಿಸಿ ಬಿಟ್ಟು, “ಇವರು ಯಾವುದೋ ಯುದ್ಧ ಗೆದ್ದವರಂತೆ ಕುಳಿತಿದ್ದಾರೆ ಎಂದು ಟೀಕಿಸಿದರು.

ಸಂಸದರ ಅಮಾನತು ಹಿನ್ನೆಲೆಯಲ್ಲಿ ಪ್ರತಿಭಟನೆ
ಲೋಕಸಭೆಯ ನಿಯಮಗಳನ್ನು ಉಲ್ಲಂಘಿಸಿ ಸ್ಪೀಕರ್ ಪೀಠದತ್ತ ಪೇಪರ್‌ಗಳನ್ನು ಎಸೆದ ಕಾರಣಕ್ಕಾಗಿ ವಿಪಕ್ಷಗಳ ಎಂಟು ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು.
ಅಮಾನತುಗೊಂಡ ಸಂಸದರಲ್ಲಿ ಕಾಂಗ್ರೆಸ್‌ನ ಹಿಬಿ ಈಡನ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಯಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಪ್ರಶಾಂತ್ ಯಾದವರಾವ್ ಪಡೋಲೆ, ಚಾಮಲ ಕಿರಣ್ ಕುಮಾರ್ ರೆಡ್ಡಿ ಮತ್ತು ಡೀನ್ ಕುರಿಯಾಕೋಸ್ ಹಾಗೂ ಸಿಪಿಎಂ ಸಂಸದ ಎಸ್. ವೆಂಕಟೇಶನ್ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ ಸೇಥ್ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement