ಹಾರ-ತುರಾಯಿ ನಿಷೇಧ ನಿಯಮ ತಾವೇ ಉಲ್ಲಂಘಿಸಿದರೇ ಸಿಎಂ ಬೊಮ್ಮಾಯಿ..?

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿ ನಿಷೇಧ ಮಾಡಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವೇ ಮಾಡಿದ್ದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ವೆಚ್ಚದ ಉಡುಗೊರೆಗಳನ್ನು ನೀಡುವುದನ್ನು ನಿಷೇಧಿಸಿ ಅದರ ಬದಲು ಕನ್ನಡ ಪುಸ್ತಕವನ್ನು ಕೊಡಬಹುದು ಎಂದು ಆದೇಶ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ತಾವೇ ಅದನ್ನು ಉಲ್ಲಂಘಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಭಾನುವಾರ ನಡೆದ ‘ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ’ ಉದ್ಘಾಟನಾ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ರೇಷ್ಮೆ ಗೂಡುಗಳಿಂದ ತಯಾರಾದ ಬೃಹತ್ ಹಾರ, ಮೈಸೂರು ಪೇಟ, ಶಾಲು ಮತ್ತು ಬೆಳ್ಳಿಯ ಸ್ಮರಣಿಕೆಯೊಂದಿಗೆ ಸನ್ಮಾನಿತರಾದರು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನೂ ಇದೇ ರೀತಿ ಸನ್ಮಾನಿಸಲಾಯಿತು
.ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ತೋಟಗಾರಿಕೆ ಸಚಿವ ಮುನಿರತ್ನ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಎಲ್ಲರನ್ನೂ ಸನ್ಮಾನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದರಾದ ಮುನಿಸ್ವಾಮಿ, ಡಾ.ಉಮೇಶ್ ಜಾಧವ್, ಈರಣ್ಣ ಕಡಾಡಿ ವೇದಿಕೆಯಲ್ಲಿದ್ದರು.
ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ಬೆಲೆಯ ಉಡುಗೊರೆ ನೀಡುವುದನ್ನು ನಿಷೇಧಿಸಿ ಮುಖ್ಯಮಂತ್ರಿಯವರು ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಹಾರ, ತುರಾಯಿ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ಆದೇಶ ಹೊರಡಿಸಿದ್ದರು. ಈಗ ಅವರೇ ಅದನ್ನು ಸ್ವೀಕರಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement