ಮಂಗಳೂರು: ನಾಪತ್ತೆಯಾಗಿದ್ದ ಪುತ್ತೂರು ನಗರಸಭೆಯ ಸದಸ್ಯ ರಮೇಶ ರೈ ನೆಲ್ಲಿಕಟ್ಟೆ ಅವರು ಪಾಣೆಮಂಗಳೂರಿನ ಹಳೆಯ ನೇತ್ರಾವತಿ ಸೇತುವೆಯ ಬಳಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಸುಮಾರಿಗೆ ಪಾಣೆಮಂಗಳೂರು ಹಳೆ ಸೇತುವೆಯ ಕೆಳಭಾಗದಲ್ಲಿ ಬೈಕ್, ಅಂಗಿ ಮೊಬೈಲ್ ಮತ್ತು ಚಪ್ಪಲಿ ಬಿದ್ದಿರುವುದನ್ನು ಗಮನಿಸಿ, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳ, ಸ್ಥಳೀಯರ ಹಾಗೂ ಈಜುಪಟುಗಳ ನೆರವಿನಿಂದ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ರಮೇಶ ರೈ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.
ಅವರು ಸುಳ್ಯದಲ್ಲಿ ಮಂಗಳ ಡ್ರೈವಿಂಗ್ ಸ್ಕೂಲ್ ಮಾಲಕರಾಗಿದ್ದರು. ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರಾಗಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಪಾಣೆಮಂಗಳೂರು ಸೇತುವೆ ಬಳಿ ದೊರೆತ ಮೊಬೈಲ್ ನಿಂದ ಪೊಲೀಸರು ಕರೆ ಮಾಡಿದಾಗ, ಅದು ಪುತ್ತೂರಿನ ರಮೇಶ ರೈ ಅವರಿಗೆ ಸೇರಿದ್ದೆಂದು ತಿಳಿದುಬಂದಿತ್ತು. ಕೂಡಲೇ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ