ಮುಂಬೈ :ದಿವಂಗತ ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣಕ್ಕೆ ಆರು ವರ್ಷಗಳ ಬಳಿಕ ಮಹತ್ವದ ತಿರುವು ಸಿಕ್ಕಿದ್ದು, ಸಿಬಿಐ ಸೋಮವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದೆ. ಈ ಎಫ್‌ಐಆರ್‌ನಲ್ಲಿ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಹಾಗೂ ಶಾಸಕ ಆದಿತ್ಯ ಠಾಕ್ರೆ, ನಟ ಡಿನೋ ಮೊರಿಯಾ, ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬೆ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಆದೇಶಿಸಿದ ಸುಮಾರು ಎರಡು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕೊಲೆ, ಸಾಮೂಹಿಕ ಅತ್ಯಾಚಾರ, ಅಪರಾಧ ಸಂಚು, ಸಾಕ್ಷ್ಯ ನಾಶಪಡಿಸುವುದು ಹಾಗೂ ತಪ್ಪು ಮಾಹಿತಿ ನೀಡುವುದು ಸೇರಿದಂತೆ ವಿವಿಧ ಗಂಭೀರ ಆರೋಪಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿಧಿಗಳನ್ನು ಅನ್ವಯಿಸಲಾಗಿದೆ.
ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಹಾಗೂ ಇತರರು ಸಂಚು ರೂಪಿಸುವಲ್ಲಿ ಮತ್ತು ನಂತರ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಕಡತಗಳು ಮತ್ತು ಇತರ ಸಾರ್ವಜನಿಕ ದಾಖಲೆಗಳನ್ನು ನಾಶಪಡಿಸುವುದು ಅಥವಾ ಮುಚ್ಚಿಡುವುದು, ಅಧಿಕೃತ ದಾಖಲೆಗಳನ್ನು ತಿರುಚುವುದು ಹಾಗೂ ಅಪರಾಧಿಗಳನ್ನು ರಕ್ಷಿಸಲು ಸಾರ್ವಜನಿಕ ಹಣ, ಸಿಬ್ಬಂದಿ ಮತ್ತು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಗಳ ಬಗ್ಗೆ ಸಂಬಂಧಿತ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಪಾತ್ರವನ್ನೂ ತನಿಖೆ ನಡೆಸಬೇಕಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಆದಿತ್ಯ ಠಾಕ್ರೆ, ಡಿನೋ ಮೊರಿಯಾ, ಸೂರಜ್ ಪಾಂಚೋಲಿ, ರಿಯಾ ಚಕ್ರವರ್ತಿ ಹಾಗೂ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಂ) ವಿಳಂಬವಾಗಲು ಕಾರಣವಾದ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ ಹಲವರ ಪಾತ್ರದ ಬಗ್ಗೆ ತನಿಖೆ ಅಗತ್ಯವಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮುನ್ನ, ತನಿಖೆ ಸುಗಮಗೊಳಿಸುವ ಉದ್ದೇಶದಿಂದ ದಿಶಾ ಸಾಲಿಯಾನ್ ಸಾವಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಸಿಬಿಐ ಮುಂಬೈ ಪೊಲೀಸರಿಗೆ ಪತ್ರ ಬರೆದು ಕೇಳಿತ್ತು.
ದಿಶಾ ಸಾಲಿಯಾನ್ ಅವರು 2020ರ ಜೂನ್ 8ರಂದು ಮುಂಬೈನ ಮಲಾಡ್ ಪ್ರದೇಶದಲ್ಲಿರುವ ವಸತಿ ಕಟ್ಟಡದ 14ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದಾದ ಕೆಲವೇ ದಿನಗಳ ಬಳಿಕ ನಟ ಸುಶಾಂತ ಸಿಂಗ್ ರಜಪೂತ್ ಅವರು ಬಾಂದ್ರಾದ ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದರು. ಆ ವೇಳೆ ಮುಂಬೈ ಪೊಲೀಸರು ದಿಶಾ ಸಾಲಿಯಾನ್ ಪ್ರಕರಣದಲ್ಲಿ ಆಕಸ್ಮಿಕ ಸಾವು ವರದಿ (ADR) ದಾಖಲಿಸಿದ್ದರು.
ಕಳೆದ ವಾರ ದಿಶಾ ಸಾಲಿಯಾನ್ ಅವರ ತಂದೆ ಸತೀಶ ಸಾಲಿಯಾನ್ ಅವರು ತಮ್ಮ ಪುತ್ರಿಯ ಸಾವಿನ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಸಿಬಿಐ ಮುಂದೆ ಹೇಳಿಕೆ ದಾಖಲಿಸಿದ್ದರು.
ತಮ್ಮ ಹೇಳಿಕೆಯಲ್ಲಿ ಸತೀಶ ಸಾಲಿಯಾನ್, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಪುತ್ರ ಹಾಗೂ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಹಲವರು ಸಂಚು ಮತ್ತು ನಂತರ ಪ್ರಕರಣ ಮುಚ್ಚಿಹಾಕುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
2020ರ ಜೂನ್‌ನಲ್ಲಿ ನಡೆದ ದಿಶಾ ಸಾಲಿಯಾನ್ ಸಾವಿನ ಪ್ರಕರಣದ ತನಿಖೆಯಲ್ಲಿ ಮುಂಬೈ ಪೊಲೀಸರು ಹಲವು ಲೋಪಗಳನ್ನು ಎಸಗಿದ್ದಾರೆ ಎಂದು ಆರೋಪಿಸಿ ಸತೀಶ ಸಾಲಿಯಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್,ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸೆಪ್ಟೆಂಬರ್ 2ರಂದು ಆದೇಶಿಸಿತ್ತು.
ಈ ವೇಳೆ ಮುಂಬೈ ಪೊಲೀಸರು ಆರು ವರ್ಷಗಳ ಕಾಲ ಎಫ್‌ಐಆರ್ ದಾಖಲಿಸಲು ವಿಫಲರಾಗಿರುವುದನ್ನು ಹೈಕೋರ್ಟ್ ತೀವ್ರವಾಗಿ ಪ್ರಶ್ನಿಸಿತ್ತು. ಪೊಲೀಸರ ತನಿಖೆಯು “ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಎತ್ತುತ್ತದೆ” ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ, ತನಿಖೆಯಲ್ಲಿ “ಗಂಭೀರ ವೈಪರೀತ್ಯಗಳು” ಕಂಡುಬಂದಿವೆ ಎಂದು ಹೇಳಿತ್ತು. ಇದಲ್ಲದೆ, ದಿಶಾ ಸಾಲಿಯಾನ್ ಅವರ ಕುಟುಂಬಕ್ಕೆ ಆರು ವರ್ಷಗಳಾದರೂ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಎಡಿಆರ್ ಪ್ರತಿಗಳನ್ನು ನೀಡಿಲ್ಲ ಎಂಬ ಸಂಗತಿಯನ್ನೂ ನ್ಯಾಯಾಲಯ ದಾಖಲಿಸಿತ್ತು.
ಪೊಲೀಸರು ನಡೆಸಿದ ತನಿಖೆಯ ನಂತರ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೀರ್ಮಾನಿಸಲಾಗಿತ್ತು. ಆದರೆ, ಅವರ ತಂದೆ ಸತೀಶ ಸಾಲಿಯಾನ್ ಕಳೆದ ವರ್ಷ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ಪುತ್ರಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದೀಗ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ತನಿಖೆ ಆರಂಭಿಸಿರುವುದರಿಂದ, ಹಲವು ವರ್ಷಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ