ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ: ನಾಳೆ ಸಿಎಂ ಯಡಿಯೂರಪ್ಪ ಪರಿಶೀಲನೆ

ಬೆಂಗಳೂರು: ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆ ತತ್ತರಿಸಿದೆ, ಮಹಾರಾಷ್ಟ್ರದಲ್ಲಿ ಬಿದ್ದ ಮಳೆ ಜೊತೆಗೆ ಇಲ್ಲಿಯೂ ಮಳೆ ಸುರಿಯುತಿರುವುದರಿಂದ ಉತ್ತರ ಕರ್ನಾಟಕ್ಕೆ ಮಳೆಯ ಪ್ರವಾಹ ತೀವ್ರವಾಗಿ ಹಾನಿ ಮಾಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನಾಳೆ‌ (ಜುಲೈ 25ರಂದು) ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ. ಅತಿವೃಷ್ಟಿಯಿಂದ ತೊಂದರೆಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿಗಳಿಂದ ಮಳೆ ಹಾನಿ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿಯೇ ಇರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಸೂಚಿಸಿದ್ದಾರೆ.
ಶನಿವಾರ ಬೆಳಗ್ಗೆಯೂ ಸಹ ಅಧಿಕ ಮಳೆಯಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿಯೇ ಉಳಿದುಕೊಂಡು ಅಲ್ಲಿಗೆ ಅಗತ್ಯವಿರುವ ನೆರವು ನೀಡಬೇಕು ಹಾಗೂ ಪರಿಸ್ಥಿತಿ ಅವಲೋಕಿಸಬೇಕು ಎಂದು ಸೂಚಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದೆ. ಆಸ್ತಿ-ಪಾಸ್ತಿ ನಷ್ಟವಾಗಿದೆ. ಜಿಲ್ಲೆಯಲ್ಲಿ ಆದ ನಷ್ಟಗಳ ಬಗ್ಗೆ ನಿನ್ನೆ (ಶುಕ್ರವಾರ) ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾಹಿತಿ ಸಂಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿರುವ ಹಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಸಂಪರ್ಕ ಕಳೆದುಕೊಂಡಿವೆ, ನದಿ ಪಾತ್ರದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಕಾಳಜಿ ಕೇಂದ್ರಗಳಲ್ಲಿ ಸುಮಾರು 2 ಸಾವಿರ ಮಂದಿ ಆಶ್ರಯ ಪಡೆದಿದ್ದಾರೆ.
ಬೆಳಗಾವಿ ವ್ಯಾಪ್ತಿಯಲ್ಲಿ 36 ಸೇತುವೆಗಳು ಮುಳುಗಡೆಯಾಗಿವೆ. ಬೆಳಗಾವಿ, ಉತ್ತರ ಕನ್ನಡ ಹಾಗೂ ಧಾರವಾಡ, ಜಿಲ್ಲೆಗಳ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ರಸ್ತೆಗಳು ಹಾನಿಗೀಡಾಗಿವೆ. ಅವುಗಳ ದುರಸ್ತಿಗಾಗಿ 50 ಕೋಟಿ ರೂಪಾಯಿ ಬಿಡುಗಡೆಗೆ ಮನವಿ ಸಲ್ಲಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement