ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿ ದೊಡ್ಡ ಪ್ರಮಾಣದಲ್ಲಿ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಬಾಹ್ಯಾಕಾಶ ಇಲಾಖೆ (Department of Space – DoS) ಮಹತ್ವದ ನಿರ್ದೇಶನವನ್ನು ಹೊರಡಿಸಿದೆ. ಗಗನಯಾನ ಸೇರಿದಂತೆ ರಾಷ್ಟ್ರೀಯ ಮಹತ್ವದ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ಅರ್ಜಿಗಳನ್ನು ಇನ್ನು ಮುಂದೆ ಸಾಮಾನ್ಯ ಪ್ರಕ್ರಿಯೆಯಲ್ಲಿ ಅಂಗೀಕರಿಸಬಾರದು ಎಂದು ಇಲಾಖೆ ಸೂಚಿಸಿದೆ.
ಜುಲೈ 14ರಂದು ಹೊರಡಿಸಲಾದ ಈ ಸುತ್ತೋಲೆ ಯು.ಆರ್. ರಾವ್ ಉಪಗ್ರಹ ಕೇಂದ್ರ (URSC), ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (VSSC) ಸೇರಿದಂತೆ ಪ್ರಮುಖ ಇಸ್ರೋ (ISRO) ಕೇಂದ್ರಗಳಿಗೆ ಕಳುಹಿಸಲಾಗಿದೆ.
ಸುತ್ತೋಲೆಯಲ್ಲಿ, “ಇತ್ತೀಚಿನ ದಿನಗಳಲ್ಲಿ ಇಸ್ರೋ ಸಮೂಹ ಸಂಸ್ಥೆಗಳ ‘A’ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿಂದ, ವಿಶೇಷವಾಗಿ ಗಗನಯಾನ ಮತ್ತು ಇತರೆ ರಾಷ್ಟ್ರೀಯ ಮಹತ್ವದ ಯೋಜನೆಗಳಿಗೆ ಸಂಬಂಧಿಸಿದ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಹಾಗೂ ರಾಜೀನಾಮೆ ಅರ್ಜಿಗಳು ಹೆಚ್ಚಾಗಿವೆ. ಇದರಿಂದ ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ಪರಿಣಾಮ ಉಂಟಾಗುತ್ತಿದೆ” ಎಂದು ಉಲ್ಲೇಖಿಸಲಾಗಿದೆ.
ಇದರಿಂದಾಗಿ, ಗಗನಯಾನ ಹಾಗೂ ಇತರ ಪ್ರಮುಖ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ಸ್ವಯಂ ನಿವೃತ್ತಿ ಹಾಗೂ ರಾಜೀನಾಮೆ ಅರ್ಜಿಗಳನ್ನು ಇನ್ನು ಮುಂದೆ ಸಾಮಾನ್ಯ ಪ್ರಕ್ರಿಯೆಯಂತೆ ಅಂಗೀಕರಿಸಬಾರದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಅಂತಿಮ ತೀರ್ಮಾನ ಬಾಹ್ಯಾಕಾಶ ಇಲಾಖೆಯದ್ದೇ
ಈ ನಿರ್ದೇಶನದ ಪ್ರಕಾರ, ವಿಜ್ಞಾನಿ/ಎಂಜಿನಿಯರ್-ಎಸ್ಜಿ (SG) ಹುದ್ದೆ ಸೇರಿದಂತೆ ಅದರ ಕೆಳಮಟ್ಟದ ವೈಜ್ಞಾನಿಕ ಹಾಗೂ ತಾಂತ್ರಿಕ ಸಿಬ್ಬಂದಿಯಿಂದ ಬರುವ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ಅರ್ಜಿಗಳನ್ನು ಸಂಬಂಧಿತ ಕೇಂದ್ರಗಳ ನಿರ್ದೇಶಕರು ತಮ್ಮ ಸ್ಪಷ್ಟ ಶಿಫಾರಸುಗಳೊಂದಿಗೆ ಬಾಹ್ಯಾಕಾಶ ಇಲಾಖೆಗೆ ಕಳುಹಿಸಬೇಕು. ಅಂತಿಮ ನಿರ್ಧಾರವನ್ನು ಇಲಾಖೆ ತೆಗೆದುಕೊಳ್ಳಲಿದೆ.
ಈ ಆದೇಶವು 2020ರಲ್ಲಿ ಜಾರಿಗೆ ಬಂದಿದ್ದ ಆಡಳಿತಾತ್ಮಕ ಬದಲಾವಣೆಯನ್ನು ಹಿಂತೆಗೆದುಕೊಂಡಂತಾಗಿದೆ. ಆಗ ಇಸ್ರೋ ಕೇಂದ್ರಗಳ ನಿರ್ದೇಶಕರು ಮತ್ತು ಮುಖ್ಯಸ್ಥರಿಗೆ ವಿಜ್ಞಾನಿ/ಎಂಜಿನಿಯರ್-SG ಹಂತದವರೆಗೆ ಗ್ರೂಪ್ ‘A’ ಸಿಬ್ಬಂದಿಯ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ ಅರ್ಜಿಗಳನ್ನು ಸ್ವತಃ ಅಂಗೀಕರಿಸುವ ಅಧಿಕಾರ ನೀಡಲಾಗಿತ್ತು.
ಈ ಹೊಸ ನಿರ್ದೇಶನವನ್ನು ಸತೀಶ ಧವನ್ ಬಾಹ್ಯಾಕಾಶ ಕೇಂದ್ರ (SDSC), ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC), ಸ್ಪೇಸ್ ಅಪ್ಲಿಕೇಶನ್ಸ್ ಸೆಂಟರ್ (SAC), ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC), ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್ವರ್ಕ್ (ISTRAC) ಹಾಗೂ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (MCF) ಸೇರಿದಂತೆ ಹಲವು ಕೇಂದ್ರಗಳಿಗೂ ಕಳುಹಿಸಲಾಗಿದೆ.
ಇಸ್ರೊಕ್ಕೆ ನಷ್ಟ, ಸ್ಟಾರ್ಟ್ಅಪ್ಗಳಿಗೆ ಲಾಭ?
ಇತ್ತೀಚಿನ ವರದಿಗಳ ಪ್ರಕಾರ, 100ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಇಸ್ರೊ ತೊರೆದಿದ್ದಾರೆ. ಬೆಂಗಳೂರಿನ ಯುಆರ್ಎಸ್ಸಿ (URSC) ಹಾಗೂ ತಿರುವನಂತಪುರದ ವಿಎಸ್ಎಸ್ಸಿ (VSSC) ಕೇಂದ್ರಗಳಲ್ಲಿ ಅತಿ ಹೆಚ್ಚು ಸಿಬ್ಬಂದಿ ನಿರ್ಗಮಿಸಿದ್ದಾರೆ.
ಇಸ್ರೋ ತೊರೆದ ಹಲವರು ಖಾಸಗಿ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳಿಗೆ ಸೇರಿರುವುದಾಗಿ ತಿಳಿದುಬಂದಿದೆ. 2020ರಲ್ಲಿ ಕೇಂದ್ರ ಸರ್ಕಾರ ಖಾಸಗಿ ಬಾಹ್ಯಾಕಾಶ ವಲಯವನ್ನು ತೆರೆದ ನಂತರ ಹಾಗೂ 2023ರಲ್ಲಿ ಭಾರತೀಯ ಬಾಹ್ಯಾಕಾಶ ನೀತಿ (Indian Space Policy) ಜಾರಿಗೆ ಬಂದ ಬಳಿಕ ದೇಶದಲ್ಲಿ ಈ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ.
ಪ್ರಸ್ತುತ ಭಾರತದಲ್ಲಿ 400ಕ್ಕೂ ಹೆಚ್ಚು ನೋಂದಾಯಿತ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳು ಒಟ್ಟು 500 ಮಿಲಿಯನ್ ಅಮೆರಿಕನ್ ಡಾಲರ್ಗಿಂತ ಹೆಚ್ಚು ಹೂಡಿಕೆ ಆಕರ್ಷಿಸಿವೆ. ಇದರಲ್ಲಿ 2025ರಲ್ಲೇ ಸುಮಾರು 150 ಮಿಲಿಯನ್ ಡಾಲರ್ ಹೂಡಿಕೆ ಬಂದಿದೆ.
ಈ ಕ್ಷೇತ್ರದಲ್ಲಿ ಪಿಕ್ಸೆಲ್ (Pixxel), ಧ್ರುವ ಸ್ಪೇಸ್ (Dhruva Space), ಸ್ಕೈ ರೂಟ್ ಎರೋ ಸ್ಪೇಸ್ (Skyroot Aerospace), ಅಗ್ನಿಕುಲ್ ಕಾಸ್ಮೋಸ್ (Agnikul Cosmos) ಮತ್ತು ಬೆಲ್ಲಾಟ್ರಿಕ್ಸ್ ಎರೋಸ್ಪೇಸ್ (Bellatrix Aerospace) ಮುಂಚೂಣಿಯಲ್ಲಿವೆ.
ಇಸ್ರೋಕ್ಕೆ ಎದುರಾದ ಹಿನ್ನಡೆಗಳು
ರಾಜೀನಾಮೆಗಳ ಜೊತೆಗೆ ಇಸ್ರೋ ತನ್ನ ಪ್ರಮುಖ ಬಾಹ್ಯಾಕಾಶ ಯೋಜನೆಗಳಲ್ಲಿಯೂ ಕೆಲವು ಹಿನ್ನಡೆಗಳನ್ನು ಎದುರಿಸಿದೆ.
ಇಸ್ರೋದ “ವರ್ಕ್ಹಾರ್ಸ್” ಎಂದೇ ಖ್ಯಾತವಾಗಿರುವ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಕಳೆದ ಒಂದು ವರ್ಷದೊಳಗೆ ಸತತ ಎರಡು ಉಡಾವಣೆಗಳಲ್ಲಿ ವಿಫಲವಾಗಿದೆ.
ಈ ವರ್ಷದ ಜನವರಿಯಲ್ಲಿ, PSLV-C62 ಉಡಾವಣೆಯ ವೇಳೆ ಭೂ ವೀಕ್ಷಣಾ ಉಪಗ್ರಹ EOS-N1 ಹಾಗೂ ಹಲವು ವಾಣಿಜ್ಯ ಪೇಲೋಡ್ಗಳನ್ನು ಹೊತ್ತೊಯ್ಯುತ್ತಿದ್ದ ರಾಕೆಟ್, ಮೂರನೇ ಹಂತದ ಅಂತ್ಯದಲ್ಲಿ ಉಂಟಾದ ತಾಂತ್ರಿಕ ಅಡಚಣೆಗಳಿಂದ ನಿಗದಿತ ಮಾರ್ಗದಿಂದ ವಿಚಲಿತಗೊಂಡಿತು.
ಕಳೆದ ವರ್ಷದ ಮೇ ತಿಂಗಳಲ್ಲಿ, PSLV-C61/EOS-09 (RISAT-1B) ಉಡಾವಣೆಯಲ್ಲಿ, ಉಡಾವಣೆಯ ಸುಮಾರು 203 ಸೆಕೆಂಡುಗಳ ನಂತರ ಮೂರನೇ ಹಂತದಲ್ಲಿ ಚೇಂಬರ್ ಒತ್ತಡ (Chamber Pressure) ಏಕಾಏಕಿ ಕುಸಿದ ಪರಿಣಾಮ ರಾಕೆಟ್ ಕಾರ್ಯಕ್ಷಮತೆ ಕುಂದಿತು. ಇದರಿಂದ ಉಪಗ್ರಹವನ್ನು 529 ಕಿಲೋಮೀಟರ್ ಎತ್ತರದ ಸನ್-ಸಿಂಕ್ರೋನಸ್ ಕಕ್ಷೆಗೆ ಸೇರಿಸಲು ಸಾಧ್ಯವಾಗಲಿಲ್ಲ. ಬಳಿಕ ಮಿಷನ್ ಸ್ಥಗಿತಗೊಳಿಸಲಾಯಿತು ಹಾಗೂ ರಾಡಾರ್ ಉಪಗ್ರಹ ನಾಶವಾಯಿತು.
ಪ್ರಮುಖ ಭವಿಷ್ಯದ ಯೋಜನೆಗಳತ್ತ ಗಮನ
ಈ ಎಲ್ಲ ಸವಾಲುಗಳ ನಡುವೆಯೂ ಇಸ್ರೋ ತನ್ನ ಮುಂದಿನ ಮಹತ್ವಾಕಾಂಕ್ಷಿ ಯೋಜನೆಗಳತ್ತ ಗಮನ ಕೇಂದ್ರೀಕರಿಸಿದೆ.
ಅವುಗಳಲ್ಲಿ ಪ್ರಮುಖವಾದವು:
ಗಗನಯಾನ – ಭಾರತವನ್ನು ಸ್ವತಂತ್ರವಾಗಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿಸುವ ಗುರಿಯ ಯೋಜನೆ.
ಚಂದ್ರಯಾನ-4 – ಚಂದ್ರನಿಂದ ಮಣ್ಣಿನ ಮಾದರಿಗಳನ್ನು (Lunar Sample Return) ತರುವ ಯೋಜನೆ.
ಭಾರತೀಯ ಅಂತರಿಕ್ಷ ನಿಲ್ದಾಣ (Bharatiya Antariksh Station – BAS) – ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಯೋಜನೆ.
ಮಂಗಳಯಾನ-2 – ಮಂಗಳ ಗ್ರಹದ ಮುಂದಿನ ಅನ್ವೇಷಣಾ ಮಿಷನ್.
ಇಸ್ರೊಕ್ಕೆ ಎದುರಾಗಿರುವ ಮಾನವ ಸಂಪನ್ಮೂಲ ಸವಾಲುಗಳು ಮತ್ತು ಇತ್ತೀಚಿನ ತಾಂತ್ರಿಕ ಹಿನ್ನಡೆಗಳ ನಡುವೆಯೂ, ದೇಶದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸುವ ಉದ್ದೇಶದಿಂದ ಬಾಹ್ಯಾಕಾಶ ಇಲಾಖೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ