ಜಿಲಾಡಳಿತದಿಂದ ಗ್ರಾಮ ವಾಸ್ತವ್ಯ: ಹಲವಾರು ನಿರೀಕ್ಷೆ, ಪಾರದರ್ಶಕ ಆಡಳಿತಕ್ಕೆ ಮುನ್ನುಡಿ

  ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

ಕರ್ನಾಟಕ ಸರ್ಕಾರವು ತನ್ನ ಯೋಜನೆಗಳನ್ನು ಅರ್ಹರು ಮತ್ತು ನೈಜ ಫಲಾನುಭವಿಗಳ ಮನೆ ಬಾಗಲಿಗೆ ತಲುಪಿಸಿ ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ನಿಟ್ಟಿನಲ್ಲಿ, ಕಳೆದ ಫೆಬ್ರುವರಿ ೨೦ರಂದು ಜಿಲ್ಲಾದಿಕಾರಿಗಳ ನಡೆ ಹಳ್ಳಿಕಡೆ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ.
ತಮ್ಮ ಜಿಲ್ಲೆ ಅಥವಾ ತಾಲೂಕಿನ ಹಳ್ಳಿಗಳಲ್ಲಿ ಪ್ರತಿ ತಿಂಗಳು ೩ನೇ ಶನಿವಾರ ಸಂಪೂರ್ಣ ಜಿಲ್ಲಾಡಳಿತದೊಂದಿಗೆ ತೆರಳಿ ಅಲ್ಲಿ ಗ್ರಾಮಸ್ಥರೊಂದಿಗೆ ವಾಸ್ತವ್ಯ ಮಾಡಿ, ಜನರ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸುವ ಈ ಯೊಜನೆಯು ನಿಜಕ್ಕೂ ಗ್ರಾಮಗಳಲ್ಲಿನ ಬಡತನ ನಿರ್ಮೂಲನೆಗೋಸ್ಕರ ಗಾಂಧಿಜಿಯವರ ತತ್ಪಾದರ್ಶಕ್ಕೆ ಮತ್ತಷ್ಟು ಹೊಳಪು ತಂದು ಕರ್ನಾಟಕವನ್ನು ಆದರ್ಶ ಮತ್ತು ಕಲ್ಯಾಣ ರಾಜ್ಯವನ್ನಾಗಿಸಲಿದೆ.
ಜಿಲ್ಲಾಧಿಕಾರಿಗಳ ಮತ್ತು ತಹಶೀಲ್ದಾರರ ನಡೆ ಹಳ್ಳಿಗಳ ಕಡೆ ಎಂಬ ಪರಿಕಲ್ಪನೆ ಹೊಸತಲ್ಲ. ಈ ಹಿಂದೆ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಆಗ ಮುಖ್ಯಮಂತ್ರಿಗಳಾಗಿದ್ದ ಎಚ್‌. ಡಿ. ಕುಮಾರಸ್ವಾಮಿ ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಹಲವಾರು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಅವರ ಅಹವಾಲುಗಳನ್ನು ಆಲಿಸಿ ಸಾರ್ವಜನಿಕ ಅಹವಾಲು ಗಳಾದ ಪಿಂಚಣಿ, ವಿಧವಾ ವೇತನ, ಶಾಲಾಭಿವೃದ್ದಿ , ಬೆಳೆ ವಿಮೆ, ಸಾರಿಗೆ ವ್ಯವಸ್ಥೆ ಮುಂತಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿ ಕೊಟ್ಟು ಒಂದು ವಿನೂತನ ಬದಲಾವಣೆಗೆ ನಾಂದಿ ಹಾಡಿದ್ದರು.
ಕಾಲಾಂತರದಲ್ಲಿ ಈ ಯೋಜನೆ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿಬರದಿದ್ದರೂ ಕೂಡ, ಇದೀಗ ಮತ್ತೆ ಈ ಪ್ರಯತ್ನಕ್ಕೆ ಚಾಲನೆ ದೊರೆತಿದ್ದು ಗ್ರಾಮೀಣ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಜಿಲ್ಲಾಧಿಕಾರಿಗಳು ಮತ್ತು ತಹಶೀಲದಾರರು ರಾಜ್ಯ ಸರ್ಕರದ ನಿರ್ದೆಶನದಂತೆ, ಪ್ರತಿ ತಿಂಗಳ ಮೂರನೆ ಶನಿವಾರ ಗ್ರಾಮ ವಾಸ್ತವ್ಯ ಮಾಡಿ ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಕೊಂಡೊಯ್ದು, ಅಲ್ಲಿನ ಜನತೆಯ ಸಮಸ್ಯೆಗಳಿಗೆ ಅಂದರೆ ಗ್ರಾಮದಲ್ಲಿನ ಪಹಣಿಗಳಲ್ಲಿನ ಲೋಪದೊಷ, ಖಾತೆದಾರರ ಹೆಸರನ್ನು ಪಹಣಿ ಪತ್ರಿಕೆಯ ಕಾಲಂ ೯ ರಿಂದ ತೆಗೆದು ನೈಜ ಮತ್ತು ಅರ್ಹ ಖಾತೆದಾರರ ಹೆಸರಿಗೆ ಖಾತೆ ಮಾಡುವಿಕೆ ಹಾಗು ಗ್ರಾಮದಲ್ಲಿನ ಅರ್ಹ ವ್ಯಕ್ತಿಗಳಿಗೆ ಸರ್ಕಾರದ ವಿವಿಧ ಯೋಜನೆಯಡಿ ಮಾಸಾಶನ ಮತ್ತು ಪಿಂಚಣಿ ಸೌಲಭ್ಯಗಳ ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಸೌಲಭ್ಯೆಗಳ ಆದೇಶ ಪತ್ರಗಳನ್ನು ನೀಡುತ್ತಾರೆ.
ವಸತಿ ಯೊಜನೆಗಳಾದ ಆಶ್ರಯ ಯೊಜನೆ, ಬಸವ ಯೋಜನೆ ಇನ್ನಿತರ ಯೋಜನೆಗಳಿಗಾಗಿ ಅವಶ್ಯವಿದ್ದಲ್ಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಕ್ರಮ ವಹಿಸುವುದು, ಸರ್ಕಾರಿ ಜಮೀನು ಹಾಗು ಗಾಂವ್‌ ಠಾಣಾಗಳ ಅಕ್ರಮ ಒತ್ತುವರಿ ಕುರಿತು ಪರಿಶಿಲಿಸಿ ತೆರವುಗೊಳಿಸುವುದು, ಕೆರೆ ಒತ್ತುವರಿ, ಸ್ಮಶಾನದ ಲಭ್ಯತೆ , ಅಂಗವಿಕಲ, ವೃದ್ಯಾಪ್ಯ , ವಿಧವಾ, ಮನಸ್ಮನಿ, ಮೈತ್ರಿ , ರಾಷ್ಟ್ರಿಯ ಕೌಟುಂಬಿಕ ನೆರವು, ಅಂತ್ಯ ಸಂಸ್ಕಾರ, ಶೌಚಾಲಗಳ ನಿರ್ಮಾಣ, ಸ್ವಚ್ಛತೆಯ ಮಹತ್ವ ಹಾಗೂ ವಿವಿಧ ಮಾಸಾಶನಗಳ ಕುರಿತು ನೈಜ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಯ ಫಲಾನುಭವಿಗಳನ್ನಾಗಿಸುವುದು ಹಾಗೂ ನಕಲಿ ಫಲಾನುಭವಿಗಳ ವಿರುದ್ದ ಕ್ರಮಗಳನ್ನು ಕೈಗೊಳ್ಳಲು ಸ್ಥಳದಲ್ಲಿ ಆದೇಶಿಸಿ, ಅವರ ಕುಂದುಕೊರತೆಗಳನ್ನು ಆಲಿಸಿ ತಕ್ಷಣ ಪರಿಹಾರಗಳನ್ನು ಒದಗಿಸಲಿದ್ದಾರೆ.
ಜಿಲ್ಲಾಧಿಕಾರಿಗಳು ಗ್ರಾಮವಾಸ್ತವ್ಯ ಕೈಗೊಳ್ಳುವುದರಿಂದ ಆಡಳಿತಕ್ಕೆ ಚುರುಕು ಮೂಡಿ, ಪಾರದರ್ಶಕತೆ ಹೆಚ್ಚಾಗಿ, ಹಳ್ಳಿಗರು ತಮ್ಮ ಸೌಲಭ್ಯಗಳಿಗೋಸ್ಕರ ಜಿಲ್ಲಾ ಕೇಂದ್ರಗಳಿಗೆ ಆಗಮಿಸಿ, ಜಿಲ್ಲಾಡಳಿತದ ವಿವಿಧ ಇಲಾಖೆಗಳ ಕಚೇರಿ ಸುತ್ತಿ ಬಂದು ಬಸವಳಿಯುವ ಸಮಸ್ಯೆ ದೂರವಾಗುತ್ತವೆ. ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ದಿ, ಮೂಲಭೂತ ಸೌಕರ್‍ಯಗಳು ದೇವಸ್ಥಾನಗಳ ಅಭಿವೃದ್ಧಿ, ಸಾರಿಗೆ ಸಮಸ್ಯೆ ಮುಂತಾದ ಕುಂದು ಕೊರತೆಗಳಿಗೆ ಜಿಲ್ಲಾಧಿಕಾರಿಗಳು ಪರಿಹಾರಗಳನ್ನು ನೀಡಿದ್ದು, ಗ್ರಾಮಸ್ಥರ ಸಂತಸ ಹೆಚ್ಚಿಸಿದೆ.
ದೇಶದಲ್ಲಿ ಮೊದಲ ಬಾರಿಗೆ ‌ ಕಂದಾಯ ಇಲಾಖೆಯು ಜನರ ಬಳಿ ತೆರಳಿ ಸರ್ಕಾರಿ ಸೌಲಭ್ಯಗಳ ಕುರಿತಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸುವ ಯೋಜನೆ ಇದಾಗಿದ್ದು, ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಳ್ಳಿಗಳ ನೈಜ ಸಮಸ್ಯೆಗಳ ವಾಸ್ತವಿಕ ದೃಶ್ಯ ಲಭಿಸಿದ್ದು, ಗ್ರಾಮಿಣ ಜನತೆಗೆ ನೇರವಾಗಿಯೇ ತಮ್ಮ ಗ್ರಾಮದ ಮೂಲಭೂತ ಸೌಕರ್ಯ ಹಾಗೂ ಯೊಜನೆಗಳ ಲಾಭ ಪಡೆಯಲು ಅಧಿಕಾರಿಗಳ ಗ್ರಾಮ ವಾಸ್ತವ್ಯ ನೆರವಾಗಿದೆ.
ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ ಅವರ ಈ ಕಾರ್ಯಕ್ರಮ ರಾಜ್ಯದ ಗ್ರಾಮೀಣ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಕಂದಾಯ, ಕೃಷಿ, ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ಸಮನ್ವಯ ಬಂದಲ್ಲಿ ಗ್ರಾಮವಾಸ್ತವ್ಯ ಇತರ ರಾಜ್ಯಗಳ ಗ್ರಾಮೀಣ ಅಭಿವೃದ್ಧಿಗೆ ಮುನ್ನುಡಿ ಬರೆಯಲಿ. ಹಿಂದುಳಿದ ಮತ್ತು ಶೋಷಿತ ಜನಾಂಗಕ್ಕೆ ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಸಾಮಾಜಿಕ ನ್ಯಾಯ ಒದಗಿಸಲಿ ಎಂಬುದು ಅಲ್ಲರ ಆಶಯ.

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement