ನವದೆಹಲಿ: ಮುಂದಿನ ಆದೇಶದವರೆಗೆ 8, 9 ಮತ್ತು 10ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ (Board Exams) ಫಲಿತಾಂಶಗಳನ್ನು ಪ್ರಕಟಿಸದಂತೆ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ.
ಮಾರ್ಚ್ 22 ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ಚಂದ್ರ ಶರ್ಮಾ ಅವರ ಪೀಠ ಕರನಾಟಕದಲ್ಲಿ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಾಗೂ ಮುಂದಿನ ಆದೇಶದವರೆಗೆ 8, 9 ಮತ್ತು 10ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸದಂತೆ ನಿರ್ಬಂಧ ಹೇರಿದೆ.
ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಕಲ್ಯಾಣದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ. ವಿದ್ಯಾರ್ಥಿಗಳನ್ನು ಪೀಡಿಸಬೇಡಿ ಎಂದು ಕರ್ನಾಟಕ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ದೇವದತ್ತ್ ಕಾಮತ್ ಅವರಿಗೆ ಪೀಠ ಹೇಳಿದೆ.
ರಾಜ್ಯದ ಏಳು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇತರ 24 ಜಿಲ್ಲೆಗಳಲ್ಲಿಯೂ ಪರೀಕ್ಷೆ ನಡೆಸಲಾಗಿದೆ ಎಂದು ಇದೇ ವೇಳೆ ವಕೀಲ ಕಾಮತ್ ಹೇಳಿದರು.
ನಾಲ್ಕು ವಾರಗಳಲ್ಲಿ ಪರೀಕ್ಷೆಯ ನಿಖರ ವಿವರಗಳನ್ನು ನೀಡುವ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಏಕ ನ್ಯಾಯಾಧೀಶರ ಪೀಠದ ಮಾರ್ಚ್ 6 ರ ಆದೇಶವನ್ನು ತಳ್ಳಿಹಾಕಿ 2023-24ನೇ ಶೈಕ್ಷಣಿಕ ವರ್ಷಕ್ಕೆ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್‌ನ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಸಲ್ಲಿಸಿದ ಮೇಲ್ಮನವಿ ಸಲ್ಲಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ