ಬೆಂಗಳೂರು : “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರು ಬಳಕೆ ಮಾಡಿರುವ ಭಾಷೆ ಶೋಭೆ ತರುವಂಥದ್ದಲ್ಲ. ಭಾಷೆ ಬಳಕೆ ಮೇಲೆ ನಿಯಂತ್ರಣ ಇರಬೇಕು ಎಂಬುದನ್ನು ನಿಮ್ಮ ಕ್ಷಕಿದಾರರಿಗೆ ಹೇಳಿ” ಎಂದು ಹೈಕೋರ್ಟ್ ಶುಕ್ರವಾರ ಮೌಖಿಕವಾಗಿ ಎಚ್ಚರಿಕೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಮಮಂದಿರ ವಿಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರು ಈ ವಿಚಾರವಾಗಿ ತಮ್ಮ ವಿರುದ್ಧದ ಪ್ರಕರಣಕ್ಕೆ ವಜಾ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ನಡೆಸುವಾಗ ಮೌಖಿಕವಾಗಿ ಹೇಳಿತು ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ವಿಚಾರಣೆಯ ವೇಳೆ ನ್ಯಾ. ದೀಕ್ಷಿತ್ ಅವರು “ಅರ್ಜಿದಾರರು ಉತ್ತಮ ವಾಗ್ಮಿಯಾಗಿರಬಹುದು. ಹಾಗೆಂದು ಹಾಗೆಲ್ಲ ಮಾತನಾಡುವುದು ಸರಿಯಲ್ಲ. ಅವರು ನಮ್ಮ ಗೌರವಾನ್ವಿತ ಮುಖ್ಯಮಂತ್ರಿ, ನ್ಯಾಯಮೂರ್ತಿಗಳಿಗೂ ಅವರು ಗೌರವಾನ್ವಿತ ಮುಖ್ಯಮಂತ್ರಿ. ಅವರಿಗೂ ನಾವು ಗೌರವ ಕೊಡಲ್ಲ ಎಂದರೆ ಹೇಗೆ. ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹಾಗೆಲ್ಲಾ ಮಾತನಾಡಬಾರದು ಎಂದು ನಿಮ್ಮ ಕಕ್ಷಿದಾರರಿಗೆ ಹೇಳಿ ಎಂದು ಹೇಳಿದರು ಎಂಬುದಾಗಿ ವರದಿ ಹೇಳಿದೆ.
ಅವರಿಗೆ ನಾವು ಮತ ಹಾಕುತ್ತೇವೋ, ಇಲ್ಲವೋ ಅದು ಬೇರೆ. ಆದರೆ, ಅವರು ನಮ್ಮ ಮುಖ್ಯಮಂತ್ರಿ. ಅವರಿಗೆ ಏಕವಚನದಲ್ಲಿ ಮಾತನಾಡುವುದು ಶೋಭೆ ತರುವಂಥದಲ್ಲ. ಅವರ ನೀತಿಯನ್ನು ನಾವು ಇಷ್ಟ ಪಡುತ್ತೇವೋ ಇಲ್ಲವೋ, ಅವರು ನಮ್ಮ ಮುಖ್ಯಮಂತ್ರಿ. ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯನ್ನು, ನಾವು ಒಪ್ಪಲಿ ಬಿಡಲಿ.. ಅವರು ನಮ್ಮ ರಾಜ್ಯದವರು, ದೇಶದವರು. ಚುನಾವಣೆಯಲ್ಲಿ ಸೋಲಿಸಿ, ಅದು ಬೇರೆ ಮಾತು. ಆದರೆ ಅವರಾಗಲಿ, ನೀವಾಗಲಿ ಹೀಗೆ ಮಾತನಾಡುವಂತಿಲ್ಲ. ಗೌರವಯುತವಾಗಿ ಮಾತನಾಡಬೇಕು ಎಂದು ತಿಳಿಹೇಳಿ ಎಂದರು.
ಘಟನೆಯೊಂದನ್ನು ಉಲ್ಲೇಖಿಸಿದ ಪೀಠವು “ಮಾಜಿ ಪ್ರಧಾನಿ ʼಇಂದಿರಾ ಜವಾಬ್ ದೋʼ ಎಂಬ ಪುಸ್ತಕಕ್ಕೆ ಮುನ್ನುಡಿ ಬರೆಯಲು ವಾಜಪೇಯಿ ಅವರನ್ನು ಕೇಳಲಾಗಿತ್ತಂತೆ. ಆಗ ವಾಜಪೇಯಿ ಅವರು ಒಂದು ಷರತ್ತು ವಿಧಿಸಿದ್ದರಂತೆ. ಅದೇನೆಂದರೆ ʼಇಂದಿರಾಜೀ ಜವಾಬ್ ದೀಜಿಯೇʼ ಎಂದು ಪುಸ್ತಕದ ಹೆಸರು ಬದಲಿಸಿದರೆ ಮುನ್ನುಡಿ ಬರೆಯುವುದಾಗಿ ಹೇಳಿದ್ದರಂತೆ. ಇದು ಮೇಲ್ಪಂಕ್ತಿ” ಎಂದು ಉದಾಹರಿಸಿದರು.
ಇವತ್ತು ಒಂದು ಪಕ್ಷ, ನಾಳೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದುವೇ ನಮ್ಮ ದೇಶದ ಸೌಂದರ್ಯ. ನೀವು (ಅರ್ಜಿದಾರರ ವಕೀಲ) ನಿಮ್ಮ ಕಕ್ಷಿದಾರರಿಗೆ ಸಲಹೆ ನೀಡಬೇಕು” ಎಂದು ಪೀಠ ಹೇಳಿತು.
ನಂತರ ಪೀಠವು ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ಆದೇಶಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲ ಪವನ್ ಚಂದ್ರ ಶೆಟ್ಟಿ ಎಚ್. ಹಾಗೂ ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ ಅವರು ವಾದಿಸಿದರು.
ಪ್ರಕರಣದ ಹಿನ್ನೆಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಗೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಠಾಣೆಯಲ್ಲಿಐಪಿಸಿ ಸೆಕ್ಷನ್‌ಗಳಾದ 153, 153ಎ, 505(2) ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ವಜಾ ಕೋರಿ ಅನಂತಕುಮಾರ ಹೆಗಡೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ