ಬೆಂಗಳೂರು : ಏಪ್ರಿಲ್ 15ರ ನಂತರ ಇದೇ ಮೊದಲ ಬಾರಿಗೆ ಕರ್ನಾಟಕದ ಕೋವಿಡ್ ಸಕಾರಾತ್ಮಕತೆ (ಪಾಸಿಟಿವಿಟಿ) ದರ 10ಕ್ಕಿಂತ ಕಡಿಮೆ ಬಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದ್ದಾರೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 1,42,291 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. 13,800 ಜನರಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗಿದೆ. ಕೋವಿಡ್ ಸಕಾರಾತ್ಮಕತೆ ದರ ಶೇ.10 ಕ್ಕಿಂತ ಕಡಿಮೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಶುಕ್ರವಾರ 25,346 ಮಂದಿ ಸೋಂಕಿತರು ಗುಣಮುಖವಾಗಿದ್ದು, ಇವರಲ್ಲಿ 8,852 ಮಂದಿ ಬೆಂಗಳೂರಿನವರು ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಒಂದು ವಾರ ಅಂದರೆ ಜೂನ್ 14ರ ವರೆಗೆ ರಾಜ್ಯ ಸರ್ಕಾರ ಲಾಕ್ ಡೌನ್ ವಿಸ್ತರಿಸಿದೆ.
ಕೊರೊನಾ ಸಕಾರಾತ್ಮಕತೆ ದರ ಆಧರಿಸಿ ಅನ್ಲಾಕ್ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಕಾರಾತ್ಮಕತೆ ದರ ಶೇ. 5ಕ್ಕಿಂತ ಕಡಿಮೆ ಬಂದರೆ ಲಾಕ್ಡೌನ್ ನಿರ್ಬಂಧವನ್ನು ಹಂತಹಂತವಾಗಿ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ