ಬೆಂಗಳೂರು: ಬೆಂಗಳೂರು ಬೀದಿಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಿತ್ರ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಮನೆಯೊಂದಕ್ಕೆ ಕನ್ನ ಹಾಕಲು ಹೋದ ಕಳ್ಳನೊಬ್ಬ, ಸಾರ್ವಜನಿಕರಿಂದ ಏಟು ತಿಂದ ಮೇಲೆ ಸ್ವತಃ ಪೊಲೀಸರ ಬಳಿ ಹೋಗಿ ದೂರು ನೀಡಿದ್ದಾನೆ ಎಂದು ವರದಿಯಾಗಿದೆ. ವಿಚಿತ್ರವೆಂದರೆ ತಾನು ದರೋಡೆಗೆ ಯತ್ನಿಸುವಾಗ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು ನೀಡಿದ್ದಾನೆ…!
ಜನವರಿ 31ರಂದು ಚೊಕ್ಕನಹಳ್ಳಿ ಮುಖ್ಯರಸ್ತೆ ಸಮೀಪದ ಮನೆಯೊಂದಕ್ಕೆ ಆಟೋ ಚಾಲಕನೊಬ್ಬ ವಿದ್ಯುತ್ ಉಪಕರಣಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ನುಗ್ಗಿದ್ದ ಎನ್ನಲಾಗಿದೆ. ಮನೆಯವರು ಆತನನ್ನು ಪ್ರಶ್ನಿಸಿದಾಗ ಶುರುವಾದ ಮಾತಿನ ಚಕಮಕಿ, ವಿಕೋಪಕ್ಕೆ ತಿರುಗಿದೆ.
ಆರೋಪಿಯ ಉದ್ದಟತನ ಇಲ್ಲಿಗೆ ನಿಲ್ಲಲಿಲ್ಲ. ಆತ ತನ್ನ ಇಬ್ಬರು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಮೂವರೂ ಸೇರಿ ಮನೆಯಲ್ಲಿದ್ದ ದಂಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಬಿಯರ್ ಬಾಟಲಿಯಿಂದ ವ್ಯಕ್ತಿಯ ತಲೆಗೆ ಹೊಡೆದಿದ್ದರಿಂದ ಗಾಜಿನ ಚೂರುಗಳು ತಗುಲಿ ಮಹಿಳೆಯ ಕೆನ್ನೆಯೂ ಗಾಯವಾಗಿದೆ ಎಂದು ಹೇಳಲಾಗಿದೆ.
ಮಹಿಳೆಯ ಕಿರುಚಾಟ ಕೇಳಿ ನೆರೆಹೊರೆಯವರು ಓಡಿ ಬರುತ್ತಿದ್ದಂತೆ, ಆತನ ಇಬ್ಬರು ಗೆಳೆಯರು ಆಟೋ ಹತ್ತಿ ಪರಾರಿಯಾಗಿದ್ದಾರೆ. ಆದರೆ, ಈ ಗದ್ದಲದ ನಡುವೆ ಸಿಕ್ಕಿಬಿದ್ದ ಆ ಕಳ್ಳನಿಗೆ ಗುಂಪಿನಲ್ಲಿದ್ದ ಯಾರೋ ಒಬ್ಬರು ಮರದ ಪಟ್ಟಿಯಿಂದ ಹೊಡೆದಿದ್ದಾರೆ.
ಹೊಡೆತ ತಿಂದ ಕಳ್ಳ ಈಗ ದೂರುದಾರ!
ಏಟು ತಿಂದ ನೋವಿನಿಂದಾಗಿ ಆತ ನೇರವಾಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾನೆ, ನಂತರ ತನ್ನ ಮೇಲೆ ಹಲ್ಲೆ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ದರೋಡೆಗೆ ಯತ್ನಿಸುವಾಗ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳತನದ ಯತ್ನ ಹಾಗೂ ಹಲ್ಲೆ ಎರಡೂ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ