ನದಿಗಳು ನಮ್ಮ ಜೀವ ವಿಮೆ : ನದಿ ಜೋಡಣೆ ಹೆಸರಿನಲ್ಲಿ ಇವನ್ನು ಒತ್ತೆ ಇಡಲು ಬಿಡೆವು

ಅಶೋಕ ಹಾಸ್ಯಗಾರ, ಹಿರಿಯ ಪತ್ರಕರ್ತರು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಥಳೀಯ ಜನರ ವಿರುದ್ಧ ನಡೆಯಲು ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ ಶತಾಯಗತಾಯ ಬೇಡ್ತಿ–ವರದಾ ನದಿಜೋಡಣೆ ಹಾಗೂ ಅಘನಾಶಿನೀ–ವೇದಾವತೀ ನದಿ ಜೋಡಣೆಗೆ ಕಂಕಣ ತೊಟ್ಟವರಂತೆಯೇ ಮುನ್ನುಗ್ಗುತ್ತಿರುವುದನ್ನು ತಡೆಯುವ ಹೋರಾಟಕ್ಕೆ ಸರ್ವ ಪ್ರಯತ್ನವನ್ನೂ ಮಾಡುವುದು ಅತ್ಯವಶ್ಯಕವಾದ ಕಾರ್ಯವಾಗಬೇಕಾಗಿದೆ. ಅದರ ತೀರ್ಮಾನ ಜನವರಿ 11ರಂದು ನಡೆಯಲಿರುವ ಬೃಹತ್ ಸಮಾವೇಶ.

  ನದಿಯ ಹರಿವು ಮೇಲ್ನೋಟಕ್ಕೆ ಕಾಣುವುದೆಷ್ಟೋ ಅದರ ದುಪ್ಪಟ್ಟು ಅಂತರ್ವಾಹಿನಿಯಾಗಿರುತ್ತದೆ ಎಂಬುದು ತಿಳಿದಿರಬೇಕಾದ ಸತ್ಯ. ಈ ನದಿಗಳ ಹರಿವಿಗೆ ಕಸುವು ತುಂಬುವ ಅನೇಕ ಚಿಕ್ಕ ಪುಟ್ಟ ತೊರೆಗಳಿರುತ್ತವೆ, ಇವುಗಳನ್ನು ಭೂ-ಜೈವಿಕ ನರಮಂಡಲವೆನ್ನುತ್ತಾರಷ್ಟೇ? ಈ ನರಮಂಡಲದ ಯಾವುದೇ ಭಾಗದಲ್ಲಿ ಹಾನಿಯಾದರೂ ಅದರ  ದುಷ್ಪರಿಣಾಮ ತಕ್ಷಣಕ್ಕೆ ಅನುಭವದಲ್ಲಿ ಭಾಸವಾಗದಿದ್ದರೂ ಯಾವುದಾದರೂ ಕಾಲಘಟ್ಟದಲ್ಲಿ ಗೊತ್ತಾಗದೇ ಇರದು. ಉತ್ತರ ಕನ್ನಡವೂ ಸೇರಿದಂತೆ ನದಿಗಳಿಗೆ ಅಣೆಕಟ್ಟು ಕಟ್ಟಿ, ವಿದ್ಯುತ್ ಉತ್ಪಾದನೆ, ಕುಡಿಯುವ ನೀರಿನ ವ್ಯವಸ್ಥೆ, ಬೆಳೆಗಳಿಗೆ ನೀರು ಹರಿಸುವುದೇ ಮೊದಲಾದ ಯೋಜನೆಗಳನ್ನು ನೆರವೇರಿಸಲಾಗಿದೆ. ಇವು ನಮ್ಮ ಕಣ್ಮುಂದೆ ಇವೆ.
ಇಂತಹ ಯೋಜನೆಗಳ  ಸಮಾಜೋ–ಸಾಂಸ್ಕೃತಿಕ, ಸಮಾಜೋ–ಆರ್ಥಿಕ ವಲಯಗಳ ಮೇಲೆ ದೀರ್ಘಾವಧಿ ಪರಿಣಾಮಗಳ ಅಧ್ಯಯನ ವ್ಯಾಪಕವಾಗಿ ನಡೆದಿಲ್ಲ, ನಡೆದವುಗಳಲ್ಲಿ ಸಮಾಜೋ—ಸಾಂಸ್ಕೃತಿಕ ಅಧ್ಯಯನವಾಗಲೇ ಇಲ್ಲ. ಶರಾವತಿ ಮತ್ತು ಕಾಳಿ ನದಿ ಜಲವಿದ್ಯುತ್ ಯೋಜನೆಗಳಿಂದ ಉಧ್ವಸ್ಥವಾದ ಅಪರೂಪದ, ಅನನ್ಯವಾದ ಸಾಂಸ್ಕೃತಿಕ ಪರಂಪರೆಗಳು ನಾಶವಾದವು. ಅವು ವ್ಯಾವಹಾರಿಕ ದೃಷ್ಟಿಯಿಂದ ಸರ್ಕಾರಕ್ಕೆ ಬೇಕಾಗಿಲ್ಲ, ಆದರೆ ಅವುಗಳು ಸಾಮಾಜಿಕ ಸ್ವಾಸ್ಥ್ಯ ರಕ್ಷಣೆಯ ಮಾನದಂಡಗಳಾಗಿದ್ದವು. ಯೋಜನಾಪೀಡಿತರ ನಿರಾಶ್ರಿತ ಬದುಕಿನ ಅವಸ್ಥೆಗಳ ನಡುವೆ ಅವುಗಳನ್ನು ಉಳಿಸಿಕೊಳ್ಳಲು ಬಹುತೇಕ ಸಾಧ್ಯವಾಗದೇ ಹೋಯಿತು, ಇಂತಹ ದುರಂತಗಳು ನಮ್ಮ ಇತಿಹಾಸದ ಭಾಗವಾಗಿದ್ದರೂ ಪಾಠ ಕಲಿಯದೇ ಇನ್ನಷ್ಟು ಅನಾಗರಿಕ ಯೋಜನೆಗಳಿಗೆ ನಾವು ಬಲಿಯಾಗಬೇಕೇ?
ಉತ್ತರ ಕನ್ನಡದ ಅನನ್ಯ ಪ್ರಾಕೃತಿಕ ಸಂಪತ್ತೇ ಅದರ ನಾಶಕ್ಕೂ ಕಾರಣವಾಗುವುದಕ್ಕೆ ಅಧಿಕಾರದಲ್ಲಿರುವವರ ದುರಾಸೆ ಕಾರಣವಾಗಿದೆ. ಈ ನೈಸರ್ಗಿಕ ಸಂಪನ್ಮೂಲ ಸ್ಥಳೀಯರಾದ ನಮ್ಮ ಸೊತ್ತು, ಅದನ್ನು ಕಾಪಾಡಿಕೊಂಡು ಬಂದ ನಮಗೆ ಅದರ ಅಳಿವು ಉಳಿವಿನ ಕುರಿತಾದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆಯೇ ಹೊರತೂ ನಾವು ಆರಿಸಿ ಕಳುಹಿಸಿದ ಪ್ರತಿನಿಧಿಗಳ ವಿವೇಚನೆಗಿಲ್ಲ.
ನದಿಗಳು ಅವುಗಳ ಆಸುಪಾಸಿನ , ಜಲಾನಯನ ಪ್ರದೇಶಗಳ ಜನತೆಯ ಮತ್ತು ಪ್ರಾಣಿ ಪಕ್ಷಿಗಳ, ಹಾಗೂ ಸಸ್ಯ ಸಂಕುಲದ ಜೀವ ವಿಮೆಯಾಗಿವೆ. ಇವುಗಳನ್ನು ಅನ್ಯ ಪ್ರದೇಶದ ಜನರ ಜೀವನದ ಭಾಗವಾಗಿ ಹಂಚಿಕೊಡುವುದು ಅಕ್ರಮ, ಅನ್ಯಾಯ ಮತ್ತು ಅಸಾಂವಿಧಾನಿಕ ಮಾತ್ರವಲ್ಲ ಕಾಯ್ದೆ ಬಾಹಿರ ನಡೆಯಾಗಿದೆ. ಈ ಸರ್ವಾಧಿಕಾರಿ ಧೋರಣೆ ಸಂಪೂರ್ಣ ಖಂಡನೀಯ.
 ಭೂ–ಜೈವಿಕ ನರಮಂಡಲವಾಗಿರುವ ನದಿ–ನದಗಳನ್ನು ತಿರುಚಿದರೆ ಖಂಡಿತವಾಗಿಯೂ ಅದರಿಂದ ಭೂ ಪ್ರಸ್ತಾರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ಅನೇಕ ಇಂತಹ ಯೋಜನೆಗಳಿಂದ ಸಾಬೀತಾಗಿದೆ. ಭಾರೀ ಯೋಜನೆಗಳಿಂದ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆಯ ಮೇಲೆ ಮತ್ತೆ ಅಂತಹ ಯೋಜನೆಗಳನ್ನು ತಂದು ಪ್ರಹಾರ ಮಾಡುವುದನ್ನು ಸರ್ವಥಾ ಒಪ್ಪತಕ್ಕುದಲ್ಲ. ನಮ್ಮ ಜಿಲ್ಲೆಯು ನೈಸರ್ಗಿಕ ಪಕ್ಷವಾತಕ್ಕೋ, ಅರ್ಬುದ ವ್ರಣಕ್ಕೋ ಈಡಾಗಲು ಬಿಡುವುದಿಲ್ಲ.
 ಇನ್ನೊಂದು ಗಮನಾರ್ಹವಾದ ಮತ್ತು ಗಂಭೀರವಾದ ಪ್ರಾಕೃತಿಕ ನಿಯಮವೇನೆಂದರೆ ನದಿಯ ಹರಿವು, ಬೀಸುವ ಗಾಳಿ, ಭೂ-ಸಾಗರಾಂತರ್ಗತ ವಾಹಿನಿಗಳ ಮುಮ್ಮುಖ–ಹಿಮ್ಮುಖ ಚಲನೆಯು ಭೂ ಪರಿಭ್ರಮಣಕ್ಕಿರುವ ವೇಗವರ್ಧಕಗಳು ಹಾಗೂ ನಿಯಂತ್ರಣ ಮಾಧ್ಯಮಗಳು. ಇವುಗಳ ಚಲನವಲನದಲ್ಲಿ ವ್ಯತ್ಯಾಸವಾದರೆ ಪ್ರಾಕೃತಿಕ ಅಸಮತೋಲನ ಖಂಡಿತ. ಈಗಾಗಲೇ ಹಲವೆಡೆಯಲ್ಲಿ ನಿಸರ್ಗ ವಿರೋಧಿ ಯೋಜನೆಗಳಿಂದಾಗುತ್ತಿರುವ ಅಪಾಯಗಳ ಅನುಭವ ಸಾಕಷ್ಟಾಗಿವೆ. ಉತ್ತರ ಕನ್ನಡವೂ ಅದಕ್ಕೆ ಹೊರತಾಗಿಲ್ಲ, ಆದ್ದರಿಂದ ಮತ್ತೆ ಮತ್ತೆ ಇಂತಹ ಭಾರೀ ಯೋಜನೆಗಳಿಗೆ ನಮ್ಮ ಆಸ್ಪದವಿಲ್ಲ.
   ಉತ್ತರ ಕನ್ನಡ ಜಿಲ್ಲೆಯ ಜೀವ ವಿಮಾ ಸಂಪನ್ಮೂಲವನ್ನು ಬೇರೆಯವರ ಪಾಲಾಗಲು ಒಪ್ಪುವುದಿಲ್ಲ. ಇಂದಿನ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಇದನ್ನೂ ಮೀರಿ ಮುಂದುವರಿದರೆ ಎಲ್ಲ ರೀತಿಯ ಹೋರಾಟಗಳನ್ನೂ ಸರ್ಕಾರ ಎದುರಿಸಬೆಕಾಗುತ್ತದೆ.
-ಅಶೋಕ ಹಾಸ್ಯಗಾರ, ಹಿರಿಯ ಪತ್ರಕರ್ತರು, ಶಿರಸಿ
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement