ಬೆಂಗಳೂರು: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶುಕ್ರವಾರದಿಂದ ಮಳೆ ಮತ್ತೆ ತೀವ್ರತೆ ಪಡೆಯಲಿದ್ದು, ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 22ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಒಂದೆರಡು ಕಡೆ ಭಾರಿ ಮಳೆಯಾಗಲಿದೆ ಹಾಗೂ ರಾಜ್ಯದ ಇತರೆಡೆ ಹಗುರ ಮಳೆಯಾಗಲಿದೆ. ಮೇ 23 ರಂದು, ತುಮಕೂರು, ಚಿತ್ರದುರ್ಗದ ಹಲವೆಡೆ ಜೋರಾಗಿ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ರಾಮನಗರ, ಮೈಸೂರು ಸುತ್ತಮುತ್ತ, ಶಿವಮೊಗ್ಗ, ದಾವಣಗರೆ, ವಿಜಯನಗರದಲ್ಲಿ ಜೋರಾದ ಗಾಳಿ ಸಹಿತ ಸಾಧಾರಣ ಮಳೆ ಮುನ್ಸೂಚನೆ ಇದೆ.
ಮೇ 24ರಂದು ದಕ್ಷಿಣ ಒಳನಾಡಿನ ತುಮಕೂರು, ಮಂಡ್ಯ, ಹಾಸನದಲ್ಲಿ ಜೋರಾಗಿ ಮಳೆಯಾಗುವ ಸಾಧ್ಯತೆಯಿದೆ. ಉಳಿದೆಡೆ ಗುಡುಗಿನೊಂದಿಗೆ ಹಗುರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಜೋರಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕರಾವಳಿಯ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕೆಲವೆಡೆ ಗಂಟೆಗೆ 60 ಕಿ.ಮೀ. ವೇಗದ ವರೆಗೂ ಗಾಳಿ ಬೀಸಬಹುದು. ಹೀಗಾಗಿ ಕಡಲಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ