
ಉಡುಪಿ: ಕಾಂತಾವರ ಕನ್ನಡ ಸಂಘವು ಕೊಡಮಾಡುವ ಸಾಹಿತ್ಯ, ಸಂಶೋಧನೆ, ಪತ್ರಿಕೋದ್ಯಮ, ಶಿಕ್ಷಣ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಏಳು ಜನ ಸಾಧಕರಿಗೆ ಸಂಘದ ಪ್ರತಿಷ್ಠಿತ ದತ್ತಿ ನಿಧಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅಲ್ಲದೆ ಓರ್ವರಿಗೆ ವಾರ್ಷಿಕ ಗೌರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇದನ್ನು ಡಿಸೆಂಬರ್ 28ರಂದು ನಡೆಯುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಕನ್ನಡ ಸಂಘದ ಸುವರ್ಣ ಸಂಭ್ರಮದ ದ್ವಿತೀಯ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ
ಯಕ್ಷಗಾನ ಸಾಹಿತ್ಯ ಸಂಶೋಧನಾ ಪ್ರಶಸ್ತಿ (10,000 ರೂ. ಮತ್ತು ತಾಮ್ರಪತ್ರ)ಗೆ ಅಪರೂಪದ ಯಕ್ಷಗಾನ ಸಂಶೋಧನಾ ಗ್ರಂಥ ‘ದಶರೂಪಕಗಳ ದಶಾವತಾರ’ ಕೃತಿ ರಚಿಸಿದ ನಿವೃತ್ತ ಪತ್ರಿಕಾ ಸಂಪಾದಕ, ಕವಿ ಮತ್ತು ಬರಹಗಾರರಾಗಿರುವ ಅಶೋಕ ಹಾಸ್ಯಗಾರ ಅವರನ್ನು ಆಯ್ಕೆ ಮಾಡಲಾಗಿದೆ.
ಅಶೋಕ ಹಾಸ್ಯಗಾರ ಅವರು ಪತ್ರಕರ್ತ, ಕವಿ ಮತ್ತು ಅಂಕಣಕಾರರಾಗಿ ಪ್ರಸಿದ್ಧರಾಗಿದ್ದಾರೆ. ಹತ್ತು ವರ್ಷಗಳಿಗೂ ಮೀರಿ ಅಧ್ಯಯನ ನಡೆಸಿ ಅವರು ರಚಿಸಿದ ‘ದಶರೂಪಕಗಳ ದಶಾವತಾರ’ ಎಂಬ ಕೃತಿಯು ಅಪರೂಪದಲ್ಲಿ ಅಪರೂಪವಾದ ಸಂಶೋಧನಾ ಗ್ರಂಥವಾಗಿದೆ. ಇದು ಪ್ರಕಟವಾದ ಬೆನ್ನಲ್ಲೇ ಮಂಗಳೂರು ವಿಶ್ವ ವಿದ್ಯಾಲಯದ ‘ಯಕ್ಷಮಂಗಳ’ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದು ಅವರ ಹೆಗ್ಗಳಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಸ್ಟಿಕ್ ಸೋಡಾ ಕಾರ್ಖಾನೆಯಲ್ಲಿ ಮೊದಲು ಉದ್ಯೋಗಿಯಾಗಿದ್ದ ಅವರು ನಂತರ ಮಾಧ್ಯಮ ರಂಗವನ್ನು ಪ್ರವೇಶಿಸಿದರು. ʼಕರಾವಳಿ ಮುಂಜಾವುʼ, ‘ಲೋಕ ಧ್ವನಿ’, ‘ಜನಮಾಧ್ಯಮ’ ಮೊದಲಾದ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಪ್ರಶಸ್ತಿ ಮತ್ತು ಗೌರವಗಳು:
ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ‘ಸೂರಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಪ್ರಶಸ್ತಿ’ ಮಹತ್ವದ್ದಾಗಿವೆ. ಪ್ರಸ್ತುತ, ಅವರು ಕಾವ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯಮೀಮಾಂಸೆಯ ತುಲನಾತ್ಮಕ ಅಧ್ಯಯನದ ಕಾವ್ಯದ ಮಹತ್ವವನ್ನು ಸಾರುವ ‘ಭಾರತೀಯ ಕಾವ್ಯ ವಿಲಾಸ’ ಎಂಬ ಸಂಶೋಧನಾ ಗ್ರಂಥವನ್ನು ಪ್ರಕಟಿಸುತ್ತಿದ್ದಾರೆ.

ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ( 10,000 ರೂ.ಮತ್ತು ತಾಮ್ರಪತ್ರ)ಯನ್ನು ಬಳ್ಳಾರಿಯಲ್ಲಿ ದಶಕಗಳಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಏಕೀಕರಣಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಾಗಿ ಚೆನ್ನಬಸವಣ್ಣ (ಲೋಹಿಯಾ ಪ್ರಕಾಶನ) ಅವರಿಗೆ ನೀಡಲಾಗುತ್ತಿದೆ. ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ (10,000 ರೂ. ಮತ್ತು ತಾಮ್ರಪತ್ರ)ಯನ್ನು ಅಪರೂಪದ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಸಂಶೋಧಕರಾದ ಹಾಗೂ ಶಿಕ್ಷಣ, ಅನುವಾದ ಹಾಗೂ ಸಾಹಿತ್ಯ ವಿಮರ್ಶೆಗೆ ನೀಡಿದ ಕೊಡುಗೆಗಾಗಿ ಡಾ. ಆರ್. ಲಕ್ಷ್ಮೀನಾರಾಯಣ (ನಿವೃತ್ತ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ) ಅವರಿಗೆ ನೀಡಲಾಗುತ್ತಿದೆ. ಶ್ರೇಷ್ಠ ಪತ್ರಕರ್ತ ಪ್ರಶಸ್ತಿ (10,000 ರೂ. ಮತ್ತು ತಾಮ್ರಪತ್ರ)ಯನ್ನು ಪತ್ರಿಕೋದ್ಯಮ(ಪ್ರಜಾವಾಣಿ)ದಲ್ಲಿ 34 ವರ್ಷಗಳ ಸೇವೆ ಮತ್ತು 60ಕ್ಕೂ ಹೆಚ್ಚು ಕೃತಿಗಳ ರಚನೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರಿಗೆ ನೀಡಲಾಗುತ್ತಿದೆ. ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ (10,000 ರೂ. ಮತ್ತು ತಾಮ್ರಪತ್ರ)ಯನ್ನು 41 ವರ್ಷಗಳ ಕಾಲ ಶಿಕ್ಷಣ ಸೇವೆ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸರೋಜಿನಿ ನಾಗಪ್ಪಯ್ಯ (ನಿವೃತ್ತ ಮುಖ್ಯೋಪಾಧ್ಯಾಯಿನಿ) ಅವರಿಗೆ ನೀಡಲಾಗುತ್ತಿದೆ.
ಕಾಂತಾವರ ಸಾಹಿತ್ಯ ಪ್ರಶಸ್ತಿ (10,000 ರೂ. ಮತ್ತು ತಾಮ್ರಪತ್ರ)ಯನ್ನು ಕೇರಳದ ಕಾಸರಗೋಡಿನಲ್ಲಿ ಕನ್ನಡದ ಧ್ವನಿಯಾದ, 25ಕ್ಕೂ ಹೆಚ್ಚು ಕೃತಿಗಳ ರಚನೆಕಾರರು ಹಾಗೂ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ (ಕಾಸರಗೋಡು) ಅವರಿಗೆ ನೀಡಲಾಗುತ್ತಿದೆ. ಮಂಜನಬೈಲು ರಂಗ ಸನ್ಮಾನ ಪ್ರಶಸ್ತಿ (10,000 ರೂ. ಮತ್ತು ತಾಮ್ರಪತ್ರ)ಯನ್ನು ನಟ, ನಾಟಕಕಾರ, ಗೀತರಚನೆಕಾರರಾಗಿ ಕನ್ನಡ ಮತ್ತು ತುಳು ರಂಗಭೂಮಿಗೆ ನೀಡಿದ ಕೊಡುಗೆಗಾಗಿ ಶಶಿರಾಜ ರಾವ್ ಕಾವೂರು (ಮಂಗಳೂರು) ಅವರಿಗೆ ನೀಡಲಾಗುತ್ತಿದೆ. ವಾರ್ಷಿಕ ಗೌರವ ಪ್ರಶಸ್ತಿ (5,000 ರೂ. ಮತ್ತು ತಾಮ್ರಪತ್ರ)ಯನ್ನು ಸಾರ್ವಕಾಲಿಕ ಮಹತ್ವದ ಆತ್ಮಚರಿತ್ರೆ ‘ಬೀದಿ ಬದುಕು’ ಕೃತಿಯ ಮೂಲಕ ಜೀವನಗಾಥೆಯನ್ನು ಅನಾವರಣಗೊಳಿಸಿದ್ದಕ್ಕಾಗಿ ಹುಲಿಮನೆ ಜಯರಾಮ ಹೆಗಡೆ (ಮಿಜಾರು) ಅವರಿಗೆ ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಡಿಸೆಂಬರ್ 28ರಂದು ಬೆಳಗ್ಗೆ 9:30 ರಿಂದ ಅಪರಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಧರ್ಮದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಮೋಹನ ಕುಂಟಾರ (ಕಾಸರಗೋಡು) ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ವಿಮರ್ಶಕರು ಮತ್ತು ಕಥೆಗಾರರಾದ ಬೆಳಗೋಡು ರಮೇಶ್ ಭಟ್ (ಮೈಸೂರು) ಪ್ರಶಸ್ತಿ ಪುರಸ್ಕೃತರ ಅಭಿನಂದನೆಯ ಮಾತುಗಳನ್ನಾಡಲಿದ್ದಾರೆ. ಯು. ವಿಶ್ವನಾಥ ಶೆಣೈ, ಕೆ. ಶ್ರೀಪತಿ ಭಟ್, ಕೆ. ಕಮಲಾಕ್ಷ ಕಾಮತ್, ಹಾಗೂ ಕಾರ್ಕಳದ ರಾಮಚಂದ್ರ ನಾಯಕ್ ಪಾಲ್ಗೊಳ್ಳಲಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ