ಬೆಳಗಾವಿ ಬಳಿಯ ರೆಸಾರ್ಟ್‌ನಲ್ಲಿ ಬಿಜೆಪಿ ಅತೃಪ್ತ ನಾಯಕರ ಸಭೆ…!

ಬೆಳಗಾವಿ: ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಬಳಿಯ ರೆಸಾರ್ಟ್‌ನಲ್ಲಿ ಬಿಜೆಪಿ ಅತೃಪ್ತ ನಾಯಕರು ಭಾನುವಾರ ಸಭೆ ನಡೆಸಿದರು. ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಸಂಸದರಾದ ಜಿ.ಎಂ.ಸಿದ್ಧೇಶ್ವರ, ಅಣ್ಣಾಸಾಹೇಬ ಜೊಲ್ಲೆ, ಪ್ರತಾಪ ಸಿಂಹ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಆದರೆ, ಮುಡಾ ಹಗರಣ ವಿರೋಧಿಸಿ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಿದ ಪಾದಯಾತ್ರೆ ಮುಗಿದ ಬೆನ್ನಲ್ಲೇ ಈ ಸಭೆ ನಡೆದಿರುವುದು ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಂತರ ಸಭೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು, ಇದು ಭಿನ್ನಮತೀಯ ಚಟುವಟಿಕೆಯಲ್ಲ ಎಂದು ಹೇಳಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ದುರ್ಬಳಕೆಗೆ ಸಂಬಂಧಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗಣೇಶ ಚತುರ್ಥಿ ನಂತರ ಬಿಜೆಪಿ ನಾಯಕರು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಲು ಈ ನಾಯಕರು ನಿರ್ಧರಿಸಿದರು.ಪಾದಯಾತ್ರೆಗೂ ಮುನ್ನ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿರುವ ಈ ನಾಯಕರು ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.

ಪ್ರಮುಖ ಸುದ್ದಿ :-   ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ

ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ‌ ಅರವಿಂದ ಲಿಂಬಾವಳಿ ಮಾಧ್ಯಮಗಳ ಜೊತೆಗೆ ಮಾತನಾಡಿ, ‘ಇದು ಅತೃಪ್ತರ ಅಥವಾ ಭಿನ್ನಮತಿಯರ ಸಭೆ ಅಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಹೀನಾಯವಾಗಿ ಸೋತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಆಗದಿದ್ದರೂ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗಿದೆ. ಹಾಗಾಗಿ, ಬಿಜೆಪಿ ಪಕ್ಷದ ಬಲವರ್ಧನೆ ದೃಷ್ಟಿಯಿಂದ ಪಕ್ಷದಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸಲು ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಮುಖವಾಗಿ ವಾಲ್ಮೀಕಿ ನಿಗಮದ ಹಣ ದುರುಪಯೋಗ ಮತ್ತು ಎಸ್​ಸಿಪಿ, ಟಿಎಸ್​ಪಿ ಮೀಸಲಿಟ್ಟಿರುವ ಹಣವನ್ನು ತಮ್ಮ ʼಗ್ಯಾರಂಟಿʼಗಳಿಗೆ ಬಳಸಿರುವ ಬಗ್ಗೆ ಸುದೀರ್ಘ ಹೋರಾಟ ಕೈಗೆತ್ತಿಕೊಳ್ಳಲು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ. ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಈ ಎಲ್ಲ ಸಂಗತಿಗಳನ್ನು ರಾಷ್ಟ್ರೀಯ ನಾಯಕತ್ವಕ್ಕೆ ತಿಳಿಸಲಾಗುತ್ತದೆ ಎಂದು ಹೇಳಿದರು.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement