ಬೆಂಗಳೂರು: ಗೌರಿ ಖೇಡೇಕರ ಅಲಿಯಾಸ್ ಗೌರಿ ಅನಿಲ ಸಾಂಬ್ರೇಕರ (32) ಎಂಬ ಮಹಿಳೆಯನ್ನು ಆಕೆಯ ಪತಿ ರಾಕೇಶ ರಾಜೇಂದ್ರ ಖೇಡೇಕರ (36) ಎಂಬಾತ ದೊಡ್ಡಕಮ್ಮನಹಳ್ಳಿಯ ತಮ್ಮ ಮನೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ನಂತರ ಆರೋಪಿ ರಾಕೇಶ ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾನೆ. ಮತ್ತು ಆಕೆಯ ತವರು ಮನೆಗೆ ಫೋನ್ ಮಾಡಿ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದಾನೆ… ಸ್ನಾನಗೃಹದಲ್ಲಿ ಸೂಟ್ಕೇಸ್ ಪತ್ತೆಯಾಗಿದೆ.
ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ರಾಕೇಶನ ಮೊಬೈಲ್ ಫೋನ್ ಸ್ಥಳವನ್ನು ಆಧರಿಸಿ ಪುಣೆ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ. ಆತನನ್ನು ಬೆಂಗಳೂರಿಗೆ ಕರೆತರಲು ಆಗ್ನೇಯ ವಿಭಾಗದ ಪೊಲೀಸರ ತಂಡ ಪುಣೆಗೆ ತೆರಳಿದೆ.
ಗುರುವಾರ ಸಂಜೆ 5:30ರ ಸುಮಾರಿಗೆ ಮನೆಯ ಮಾಲೀಕರು ಆಗ್ನೇಯ ವಿಭಾಗದ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಮನೆಯೊಳಗೆ ಪ್ರವೇಶಿಸಲು ಬಾಗಿಲು ಒಡೆದರು.
ಮಹಾರಾಷ್ಟ್ರ ಮೂಲದ ದಂಪತಿ ಕಳೆದ ಒಂದು ತಿಂಗಳಿನಿಂದ ವಸತಿ ಸಮುಚ್ಚಯದ ಮೊದಲ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ರಾಕೇಶ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಪದವಿ ಪಡೆದಿರುವ ಗೌರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.
ಬುಧವಾರ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಪತ್ನಿಯನ್ನು ಕೊಂದ ನಂತರ ರಾಕೇಶ ಮಹಾರಾಷ್ಟ್ರದಲ್ಲಿರುವ ತನ್ನ ಹೆಂಡತಿಯ ತವರು ಮನೆಯವರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಅಪರಾಧ ಬೆಳಕಿಗೆ ಬಂದಿದೆ. ಅಲ್ಲದೇ ತನ್ನ ಸ್ನೇಹಿತನೊಬ್ಬನಿಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದ. ನಂತರ ಮನೆ ಮಾಲೀಕರಿಗೆ ಮಾಹಿತಿ ಸಿಕ್ಕ ನಂತರ ಅವರು ಬಂದಾಗ ಬಾಗಿಲುಗಳು ಹೊರಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಹುಳಿಮಾವು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ರಾಕೇಶ ಬುಧವಾರ ಪತ್ನಿಯನ್ನು ಕೊಲೆ ಮಾಡಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ತಪ್ಪಿಸಿಕೊಂಡ ಬಳಿಕ ಕಟ್ಟಡದ ಮತ್ತೊಬ್ಬ ನಿವಾಸಿಗೆ ಕರೆ ಮಾಡಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ನಂತರ ಗುರುವಾರ ಸಂಜೆ 5:30 ರ ಸುಮಾರಿಗೆ ಕಟ್ಟಡದ ಮಾಲೀಕರು ಬೆಂಗಳೂರು ಆಗ್ನೇಯ ಪೊಲೀಸ್ ನಿಯಂತ್ರಣ ಕೊಠಡಿ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಕರೆಯನ್ನು ಅನುಸರಿಸಿ, ಪೊಲೀಸರು ಶೀಘ್ರವಾಗಿ ಬೀಗ ಹಾಕಿದ್ದ ದಂಪತಿಯ ಮನೆಗೆ ಧಾವಿಸಿದರು. ಒಳಗೆ ಪ್ರವೇಶಿಸಿದಾಗ, ಬಾತ್ರೂಮ್ನಲ್ಲಿ ಸೂಟ್ಕೇಸ್ನಲ್ಲಿ ಪ್ಯಾಕ್ ಮಾಡಲಾದ ಹಾಗೂ ತೀವ್ರ ಗಾಯಗಳಿದ್ದ ಗೌರಿಯ ಶವವನ್ನು ಪತ್ತೆ ಮಾಡಿದ್ದಾರೆ. ಮೃತದೇಹ ಯಥಾಸ್ಥಿತಿಯಲ್ಲಿದ್ದರೂ ಕುತ್ತಿಗೆ ಮತ್ತು ಹೊಟ್ಟೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ