ಆಗಸ್ಟ್‌ 1ರಂದು ವಿಟಿಯು ಘಟಿಕೋತ್ಸವ : ಚಿನ್ಮಯ ವಿಕಾಸಗೆ ೧೩ ಚಿನ್ನದ ಪದಕ, ಡಾ. ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರದಾನ

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ೨೩ ನೇ ಘಟಿಕೋತ್ಸವ ಆಗಸ್ಟ್‌ ೧ರಂದು, ಮಂಗಳವಾರ ವಿಟಿಯು ಜ್ಞಾನ ಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ತಿಳಿಸಿದ್ದಾರೆ.
ವಿಟಿಯು ಸೆನೆಟ್ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೩ ನೇ ಘಟಿಕೋತ್ಸವದ ಕುರಿತು ಶುಕ್ರವಾರ (ಜುಲೈ ೨೮) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯ ಕುಲಾಧಿಪತಿ ಥಾವರಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಐಐಟಿ ಮದ್ರಾಸ್, ನಿರ್ದೇಶಕ ಪ್ರೊ.ವಿ. ಕಾಮಕೋಟಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಸಚಿವ ಡಾ.ಎಂ.ಸಿ ಸುಧಾಕರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗೌರವ ಡಾಕ್ಟರೇಟ್ ಪದವಿ ಪ್ರದಾನ:
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಶ್ರೀಗಳು ಹಾಗೂ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ವಿ.ಎಸ್. ಮೂರ್ತಿ ಹಾಗೂ ಮೈಸೂರು ಮೆಕಾನಿಕ್ ಟೈಲ್ ಕಂಪನಿ ಲಿ. ಬೆಂಗಳೂರು ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಎಚ್.ಎಸ್.ಶೆಟ್ಟಿ ಅವರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರದಾನ ಮಾಡಲಾಗುತ್ತದೆ.
ಘಟಿಕೋತ್ಸವದಲ್ಲಿ ಬಿಇ/ಬಿಟೆಕ್- ೪೨,೫೪೫., ಬಿ.ಪ್ಲಾನ್ -೦೬, ಬಿ.ಆರ್ಕ್ -೧೦ ಹಾಗೂ ಸಂಶೋಧನಾ ಪದವಿಗಳಾದ ೫೫೦ ಪಿಎಚ್ ಡಿ, ೦೪ ಎಂ.ಎಸ್.ಸಿ ಬೈ ರಿಸರ್ಚ್ ಮತ್ತು ೦೨ ಇಂಟಿಗ್ರೇಟೆಡ್ ಡ್ಯುಯಲ್ ಪದವಿಗಳು ಸೇರಿದಂತೆ ಒಟ್ಟು ೫೭೨ ಸಂಶೋಧನಾ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರಿನ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು: ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ; ಮೂವರ ಬಂಧನ

ವಿದ್ಯಾರ್ಥಿಗಳಿಗೆ ಚಿನ್ನದ ಪದಕ:
ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ಮೊದಲ ೧೦ ಪದಕ ವಿಜೇತರಾದ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ, ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮದಕಶಿರಾ ಚಿನ್ಮಯ ವಿಕಾಸ ಅವರಿಗೆ ೧೩ ಚಿನ್ನದ ಪದಕ, ಮೆಕೆನಿಕಲ್ ಇಂಜಿನಿಯರಿಂಗ್ ಅಭಿಷೇಕ್.ಜಿ ೭ ಪದಕ, ಸರ್ ಎಂ. ವಿಶ್ವೇಶ್ವರಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಗುಡಿಕಲ್ ಸಾಯಿ ವಂಶಿ ೭, ಬಳ್ಳಾರಿಯ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಕೆ. ಆರ್. ಸಂಪತಕುಮಾರ ೭ ಚಿನ್ನದ ಪದಕ ಪಡೆದಿದ್ದಾರೆ.
ಶಿವಮೊಗದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಇಂಜಿನಿಯರಿಂಗ್ ವಿಭಾಗದ ಪಾರ್ವತಿ ಸಲೇರಾ. ಜೆ ಅವರಿಗೆ ೬ ಪದಕ ಬೆಳಗಾವಿಯ ಕೆ.ಎಲ್.ಇ ಡಾ. ಎಂ. ಎಸ. ಶೇಷಗಿರಿ ಕಾಲೇಜು ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗದ ಆವಂತಿಕಾ ಎ. ಸಾವಕಾರ ೫, ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಹರ್ಷತಾ ಆರ್ ೪ ಪದಕ ಹಾಗೂ ಸಾಯಿ ವಿದ್ಯಾ, ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಇನ್ಫರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಇಶಿಕಾ ನವೀನ್ ೪, ಆಚಾರ್ಯ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ, ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಸಾಹಸ.ಎಸ್ ೨ ಪದಕ ಮತ್ತು ಆಚಾರ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಮೈನಿಂಗ್ ಇಂಜಿನಿಯರಿಂಗ್ ವಿಭಾಗದ ಕೆಂಚೋ ಗೈಲ್ ತ್ಸೇನ್ ೨ ಚಿನ್ನದ ಪದಕ ಗಳಿಸಿರುತ್ತಾರೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ತಿಳಿಸಿದರು.
ಕುಲಸಚಿವ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವ ಟಿ.ಎನ್ ಶ್ರೀನಿವಾಸ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಮುಖ ಸುದ್ದಿ :-   ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದಿಂದ ಸ್ಪರ್ಧೆ ; ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement