ತೌಕ್ಟೆ ಚಂಡಮಾರುತ: ಕರ್ನಾಟಕದಲ್ಲಿ ನಾಲ್ವರು ಸಾವು, ಕರಾವಳಿ-ಮಲೆನಾಡು 6 ಜಿಲ್ಲೆಗಳಲ್ಲಿ ಭಾರೀ ಮಳೆ

ಬೆಂಗಳೂರು: ತೌಕ್ಟೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಜಿಲ್ಲೆ ನಲುಗಿ ಹೋಗಿದೆ. ಕಳೆದ 24 ಗಂಟೆಯಿಂದ ಮೂರು ಕರಾವಳಿ ಜಿಲ್ಲೆಗಳು ಮತ್ತು ಮೂರು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿಮಳೆಯಾಗುತ್ತಿದ್ದು, ಶನಿವಾರ ರಾತ್ರಿ ಬೀಸಿದ ಗಾಳಿಗೆ ಕರ್ನಾಟಕದ ಕರಾವಳಿಯಲ್ಲಿ ನೂರಾರು ಮರಗಳು ಧರೆಗುರುಳಿವೆ.
ಇದೇ ವೇಳೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಇದುವರೆಗೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 73 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ತಿಳಿಸಿದೆ.
ತೌಕ್ಟೆ ಚಂಡಮಾರುತದಿಂದ ಕಳೆದ 24 ಗಂಟೆಗಳಲ್ಲಿ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ ಮೃತಪಟ್ಟಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಕಡಲ ಅಬ್ಬರ ಮುಂದುವರೆದಿದೆ. 112 ಮನೆಗಳು ಹಾನಿಯಾಗಿವೆ. 139 ವಿದ್ಯುತ್ ಕಂಬಗಳು ಧರೆಗುರುಳಿದ್ದು, 22 ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿಯಾಗಿದೆ.
ಕಡಲ ತೀರದಲ್ಲಿದ್ದ 318 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 11 ಪರಿಹಾರ ಕೇಂದ್ರಗಳಲ್ಲಿ 298 ಜನರಿಗೆ ಆಶ್ರಯ ನೀಡಲಾಗಿದೆ. ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಮೇ 18 ವರೆಗೆ ಭಾರಿ ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕೂಡ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ತಾಲೂಕಿನ ವನ್ನಳ್ಳಿ ಗ್ರಾಮದಲ್ಲಿ ಭಾರೀ ಗಾಳಿ ಬೀಸುತ್ತಿದೆ. ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

ಚಂಡಮಾರುತದಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಸ್ಥಳೀಯರು ನೆರವಾಗಿದ್ದಾರೆ. ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ಧಾಪುರ, ಜೊಯಿಡಾ, ದಾಂಡೇಲಿಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಇನ್ನೂ ಎರಡು ದಿನ ಕೂಡ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಭಾರತೀಯ ಹವಾಮಾನ ಇಲಾಕೆ ತೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ಮಂಗಳೂರು, ಕಾರವಾರ, ಮಲ್ಪೆ, ಭಟ್ಕಳ, ಹೊನ್ನಾವರಕ್ಕೆ ಮುನ್ನೆಚ್ಚರಿಕೆ ಘೋಷಿಸಿದೆ. ಮಲ್ಪೆ ಬೀಚ್ ಬಳಿ ಚಂಡಮಾರುತದ ರಭಸಕ್ಕೆ ತೀರದಲ್ಲಿರುವ ಮೀನುಗಾರಿಕೆ ದೋಣಿಗಳು ಹಾನಿಗೊಳಗಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement