
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾರ ಆಪ್ತೆ ವಿ. ಕೆ. ಶಶಿಕಲಾ, ಇಳವರಸಿ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.
ಫೆಬ್ರವರಿ 2 ರಂದು 65 ವರ್ಷ ವಯಸ್ಸಿನ ಸಾಮಾಜಿಕ ಕಾರ್ಯಕರ್ತೆ ಮತ್ತು ಚೆನ್ನೈನ ಶಿಕ್ಷಣ ತಜ್ಞರಾದ ಕೆ.ಎಸ್ ಗೀತಾ, ಅವರು ಸಲ್ಲಿಸಿದ ಪಿಐಎಲ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಇಬ್ಬರು ಹಿರಿಯ ಕಾರಾಗೃಹ ಅಧಿಕಾರಿಗಳಾದ ಕೃಷ್ಣ ಕುಮಾರ್ ಮತ್ತು ಅನಿತಾ ಆರ್ ವಿರುದ್ಧ ಪ್ರಾಸಿಕ್ಯೂಷನ್ ಮಾಡಲು ರಾಜ್ಯ ಸರ್ಕಾರವು ಡಿಸೆಂಬರ್ 30, 2021 ರಂದು ಅನುಮತಿ ನೀಡಿದ ನಂತರ ಜನವರಿ 7, 2022 ರಂದು ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎಸಿಬಿ ವಕೀಲ ಮನಮೋಹನ್ ಪಿ.ಎನ್. ಪೀಠಕ್ಕೆ ತಿಳಿಸಿದರು.
.ಪ್ರಕರಣದ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ನೀಡಿದ್ದ ಗಡುವು ವಿಸ್ತರಣೆ ಕೋರಿ ಎಸಿಬಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸರಕಾರ ಮತ್ತು ಎಸಿಬಿ ಪರ ವಕೀಲರು ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿತು.
ಎಸಿಬಿ ಪರ ವಕೀಲ ಪಿ. ಎನ್. ಮನಮೋಹನ್, ‘ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ. ವಿಚಾರಣಾ ನ್ಯಾಯಾಲಯಕ್ಕೆ 2022ರ ಜನವರಿ 7 ರಂದು ಆರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದರು.
ಪ್ರಕರಣದ ಹಿನ್ನೆಲೆ
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಶಶಿಕಲಾಗೆ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ಜೈಲಾಧಿಕಾರಿಗಳು ಎರಡು ಕೋಟಿ ರೂ. ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲಾಗಿತ್ತು. ನಂತರ ಪ್ರಕರಣ ತನಿಖೆಯನ್ನು ಎಸಿಬಿ ಆರಂಭಿಸಿತ್ತು.
ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿದ್ದ ಕೃಷ್ಣ ಕುಮಾರ್ ಮತ್ತು ಅಧೀಕ್ಷಕಿ ಡಾ. ಆರ್. ಅನಿತಾ ಅವರು ಶಶಿಕಲಾ ಹಾಗೂ ಅವಳ ಅತ್ತಿಗೆ ಇಳವರಸಿಗೆ ಅನಧಿಕೃತವಾಗಿ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆ. ಶಶಿಕಲಾಗೆ ಮಹಿಳಾ ಕೈದಿಗಳ ವಿಭಾಗದ ಕಾರಿಡಾರ್ನಲ್ಲಿ ಮಂಚ ಹಾಗೂ ಹಾಸಿಗೆ ವ್ಯವಸ್ಥೆ ಒದಗಿಸಿದ್ದಾರೆ. ಹಾಗಾಗಿ, ಅವರ ವಿರುದ್ಧ ಐಪಿಸಿ ಕಲಂ 120(ಬಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆ-1988ರ ಕಲಂ 13(1)(ಸಿ) ಅಡಿಯಲ್ಲಿ ಪ್ರಾಸಿಕ್ಯೂಷನ್ಗೆ ಪೂರ್ವಾನುಮತಿ ನೀಡಲಾಗಿದೆ ಎಂದು ಸರ್ಕಾರವು ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಲು ಲಂಚ ಪಡೆದ ಆರೋಪ ಹೊತ್ತಿದ್ದ ಕಾರಾಗೃಹ ಡಿಜಿಪಿಯಾಗಿದ್ದ ಎಚ್. ಎನ್. ಸತ್ಯನಾರಾಯಣ ನಿರ್ದೋಷಿಯಾಗಿದ್ದಾರೆ ಎಂದು ಎಸಿಬಿ ತನ್ನ ವರದಿಯಲ್ಲಿ ತಿಳಿಸಿದೆ ಎಂದೂ ಸರಕಾರ ಸ್ಪಷ್ಟಪಡಿಸಿದೆ

ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ
ಈ ಮಧ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಪೂರ್ವಾನುಮತಿ ನೀಡಿದ ಸರ್ಕಾರದ ಆದೇಶ ರದ್ದು ಕೋರಿ ಆರೋಪಿಯಾಗಿರುವ ಡಾ.ಆರ್ ಅನಿತಾ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ನೇತೃತ್ವದ ಏಕ ಸದಸ್ಯ ಪೀಠವು ಅನಿತಾ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ