ಬೆಂಗಳೂರು : ಕರ್ನಾಟಕ ಹಾಲು ಒಕ್ಕೂಟ ಒಂದೇ ದಿನ ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಮೇ 22 ರ ನಂತರ ಈ ದಾಖಲೆ ಸಾಧ್ಯವಾಗಿದ್ದು, ಅನುಕೂಲಕರವಾದ ಮುಂಗಾರು ಮಳೆ ಮತ್ತು ಹಸಿರು ಮೇವಿನ ಲಭ್ಯತೆಯ ಕಾರಣ ಈ ದಾಖಲೆ ಮಾಡಲು ಕೆಎಂಎಫ್ಗೆ ಸಾಧ್ಯವಾಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಜೂನ್ 28 ರಂದು 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗಿತ್ತು. ಈಗ ಅದಕ್ಕಿಂತಲೂ ಹೆಚ್ಚು ಹಾಲು ಸಂಗ್ರಹಿಸಲಾಗಿದೆ.
ಅನುಕೂಲಕರ ಹವಾಮಾನದಿಂದ ಹಾಲು ಉತ್ಪಾದನೆ ಹೆಚ್ಚಳ
ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವುದು ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮೇವಿನ ಲಭ್ಯತೆ, ಜಾನುವಾರುಗಳಲ್ಲಿ ಪೌಷ್ಟಿಕತೆ, ಆರೋಗ್ಯ ಸುಧಾರಣೆ ಹಾಲಿನ ಉತ್ಪಾದನೆ ಹೆಚ್ಚಳದಲ್ಲಿ ಪ್ರಭಾವ ಬೀರಿದೆ. ಕೆಎಂಎಫ್ ಈಗ ನಿರಂತರವಾಗಿ ದಿನಕ್ಕೆ 1 ಕೋಟಿ ಲೀಟರ್ಗಿಂತಲೂ ಹೆಚ್ಚು ಹಾಲು ಸಂಗ್ರಹಿಸುತ್ತದೆ. ಇದು ರಾಜ್ಯದ ಡೈರಿ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಕೆಎಂಎಫ್ ನಿಂದ 18 ಹೊಸ ಬಗೆಯ ಕೇಕ್ಗಳು, ಹಾಲಿನ ಉತ್ಪನ್ನಗಳು ಬಿಡುಗಡೆ
ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯ ಅಂಗವಾಗಿ, ಕೆಎಂಎಫ್ ತನ್ನ ಜನಪ್ರಿಯ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 18 ಹೊಸ ಬಗೆಯ ಕೇಕ್ಗಳು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು.
ಕೆಎಂಎಫ್ ಮತ್ತು ಅದರ ಅಂಗಸಂಸ್ಥೆಗಳಾದ ಹಾಲು ಒಕ್ಕೂಟಗಳು ಈಗಾಗಲೇ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ನಂದಿನಿ ಹಲ್ವಾ, ಬ್ರೆಡ್, ಬನ್ಗಳು ಮತ್ತು ಐಸ್ ಕ್ರೀಮ್ ಸೇರಿದಂತೆ 150 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇದೀಗ ಹೊಸ ಬೇಕರಿ ಉತ್ಪನ್ನಗಳ ಸೇರ್ಪಡೆಯೊಂದಿಗೆ, ಕೆಎಂಎಫ್ ಉದ್ಯಮ ಮತ್ತಷ್ಟು ವಿಸ್ತರಣೆಯಾದಂತಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ