
ಕೋಲ್ಕತ್ತಾ : ಮಮತಾ ಬ್ಯಾನರ್ಜಿಗೆ ಅವರ ಕ್ಷೇತ್ರದಲ್ಲೇ ಸೋಲುಣಿಸಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಚುನಾಯಿತ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಔಪಚಾರಿಕವಾಗಿ ಘೋಷಿಸಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬಿಜೆಪಿಯ ಪಶ್ಚಿಮ ಬಂಗಾಳ ಮೊದಲ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಶುಕ್ರವಾರ ಸುವೇಂದು ಅಧಿಕಾರಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬಂಗಾಳದಲ್ಲಿ 15 ವರ್ಷಗಳ ತೃಣಮೂಲ ಕಾಂಗ್ರೆಸ್ (TMC) ಆಡಳಿತ ಅಂತ್ಯಗೊಂಡಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ
ಕೋಲ್ಕತ್ತಾದಲ್ಲಿ ಇಂದು, ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಸುವೇಂದು ಅಧಿಕಾರಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಕೇಂದ್ರ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಹ-ವೀಕ್ಷಕ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ ಮಾಝಿ ಅವರ ಸಮ್ಮುಖದಲ್ಲಿ ಈ ಆಯ್ಕೆ ನಡೆಯಿತು. “ಪಶ್ಚಿಮ ಬಂಗಾಳ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸುವೇಂದು ಅಧಿಕಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನಾನು ಘೋಷಿಸುತ್ತಿದ್ದೇನೆ ಎಂದು ಅಮಿತ್ ಶಾ ಪ್ರಕಟಿಸಿದರು.
ಮಮತಾ ಬ್ಯಾನರ್ಜಿ ಭದ್ರಕೋಟೆಗೆ ಲಗ್ಗೆ
ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಡಳಿತಕ್ಕೆ ಈ ಚುನಾವಣೆ ತೆರೆ ಎಳೆದಿದೆ. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಸೋಲಿಸಿದ್ದ ಸುವೇಂದು ಅಧಿಕಾರಿ, ಈ ಬಾರಿ ಮಮತಾ ಅವರ ಭದ್ರಕೋಟೆಯಾದ ಭವಾನಿಪುರ ಕ್ಷೇತ್ರದಲ್ಲೂ 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಮಮತಾ ಅವರಿಗೆ ಸೋಲುಣಿಸಿದ್ದಾರೆ.
ಇಬ್ಬರು ಉಪಮುಖ್ಯಮಂತ್ರಿಗಳ ನೇಮಕ ಸಾಧ್ಯತೆ
ಕಳೆದ ಎರಡು ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರಲಿಲ್ಲ. ಆದರೆ, ಬಿಜೆಪಿ ಈ ಬಾರಿ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಲು ಚಿಂತನೆ ನಡೆಸಿದೆ.
ಅಸನ್ಸೋಲ್ ದಕ್ಷಿಣದಿಂದ ಗೆದ್ದಿರುವ ಅಗ್ನಿಮಿತ್ರ ಪಾಲ್ ಅವರು ಮಹಿಳಾ ಕೋಟಾದಡಿ ರೇಸ್ನಲ್ಲಿದ್ದಾರೆ.
ಸಿಲಿಗುರಿಯಿಂದ ಜಯಗಳಿಸಿರುವ ಶಂಕರ ಘೋಷ್ ಈ ಸ್ಥಾನಕ್ಕೆ ಮತ್ತೊಬ್ಬ ಪ್ರಬಲ ಸ್ಪರ್ಧಿಯಾಗಿದ್ದಾರೆ.
ಶನಿವಾರ ಪ್ರಮಾಣವಚನ ಸ್ವೀಕಾರ
ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಾಳೆ ಶನಿವಾರ ( ಮೇ 9) ಬೆಳಗ್ಗೆ 11 ಗಂಟೆಗೆ ಭವ್ಯ ಪದಗ್ರಹಣ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು, ಗ್ರಾಮೀಣ ಭಾಗದಲ್ಲಿ ಟಿಎಂಸಿ ಸಂಘಟನೆಗೆ ಶ್ರಮಿಸಿದ್ದರು. ಡಿಸೆಂಬರ್ 2020ರಲ್ಲಿಮಮತಾ ಅವರ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣ ಾವರು ಟಿಎಂಸಿ ತೊರೆದು ಬಿಜೆಪಿ ಸೇರಿದರು. ಅಂದಿನಿಂದ ಬಂಗಾಳದಲ್ಲಿ ಬಿಜೆಪಿಯ ಪ್ರಬಲ ಮುಖವಾಗಿ ಗುರುತಿಸಿಕೊಂಡಿದ್ದಾರೆ. “ಇದು ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಸರ್ಕಾರ ಎಂದು ಹೇಳುವ ಮೂಲಕ ಅಮಿತ್ ಶಾ ಅವರು ಬಂಗಾಳದಲ್ಲಿ ಬಿಜೆಪಿಯ ಈ ವಿಜಯವು ಸೈದ್ಧಾಂತಿಕವಾಗಿಯೂ ಅತ್ಯಂತ ಮಹತ್ವದ್ದು ಎಂದು ಬಣ್ಣಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ