ವಾಟ್ಸಾಪ್​ನಲ್ಲಿ ಮದುವೆ ಆಮಂತ್ರಣ ಕಾರ್ಡ್‌ ಬಂದ್ರೆ ಕ್ಲಿಕ್ ಮಾಡುವ ಮುನ್ನ ಎಚ್ಚರ ; ಕ್ಲಿಕ್ ಮಾಡಿ 10 ಲಕ್ಷ ರೂ. ಕಳೆದುಕೊಂಡ ಅಧಿಕಾರಿ !

ಬೆಂಗಳೂರು : ನಗದಲ್ಲಿ ಆಘಾತಕಾರಿ ಸೈಬರ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆಯ ರೂಪದಲ್ಲಿದ್ದ ಮಾಲ್‌ವೇರ್ (APK) ಫೈಲ್ ಡೌನ್‌ಲೋಡ್ ಮಾಡಿದ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ಬರೋಬ್ಬರಿ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಅಧಿಕಾರಿಗೆ ವಾಟ್ಸಾಪ್‌ನಲ್ಲಿ ಬಂದಿದ್ದ ಮದುವೆ ಆಹ್ವಾನ ಪತ್ರಿಕೆಯು ನಿಜವಾದದ್ದೇ ಎಂದು ನಂಬಿ, ಅವರು ಆ ಫೈಲ್ ಅನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ, ಜುಲೈ 14 ರಂದು ಅವರ ‘ಬ್ಯಾಂಕ್ ಆಫ್ ಬರೋಡಾ’ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ ಸರಣಿ ವ್ಯವಹಾರಗಳು ನಡೆದಿವೆ. ನಂತರ ಖಾತೆಯನ್ನು ಪರಿಶೀಲಿಸಿದಾಗ, ಬರೋಬ್ಬರಿ 9,96,659 ರೂ. ಹಣ ಗೊತ್ತಿಲ್ಲದಂತೆ ಡ್ರಾ ಆಗಿರುವುದು ಕಂಡುಬಂದಿದೆ.

ತಾನು ಮೋಸ ಹೋಗಿರುವುದನ್ನು ಅರಿತ ಅಧಿಕಾರಿ, ತಕ್ಷಣವೇ ಮೊಬೈಲ್‌ನಲ್ಲಿದ್ದ ಎಲ್ಲಾ ಎಪಿಕೆ (APK) ಫೈಲ್‌ಗಳನ್ನು ಡಿಲೀಟ್ ಮಾಡಿ, ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೈಬರ್ ಕ್ರಿಮಿನಲ್‌ಗಳ ಕಾರ್ಯಾಚರಣೆ ಹೇಗೆ?
ಅಜ್ಞಾತ ಸೈಬರ್ ವಂಚಕರು ಮದುವೆ ಆಹ್ವಾನ ಪತ್ರಿಕೆ ರೂಪದಲ್ಲಿದ್ದ ಮಾರಕ ‘APK’ ಫೈಲ್ ಮೂಲಕ ಅಧಿಕಾರಿಯ ಮೊಬೈಲ್ ಸಾಧನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ಶಂಕಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆ

ಪೊಲೀಸ್ ಅಧಿಕಾರಿಗಳ ಪ್ರಕಾರ, ಸೈಬರ್ ಅಪರಾಧಿಗಳು ವಾಟ್ಸಾಪ್ ಮೂಲಕ ಇಂತಹ ಎಪಿಕೆ ಫೈಲ್‌ಗಳನ್ನು ಕಳುಹಿಸಿ ಮಾಲ್‌ವೇರ್ ಆಧಾರಿತ ವಂಚನೆ ಎಸಗುತ್ತಿದ್ದಾರೆ. ಮದುವೆ ಆಹ್ವಾನ ಪತ್ರಿಕೆಗಳು, ಶುಭ ಸಮಾರಂಭಗಳ ಆಹ್ವಾನಗಳು ಅಥವಾ ನೈಜವೆಂದು ತೋರುವ ಇತರೆ ಸಂದೇಶಗಳ ಹೆಸರಿನಲ್ಲಿ ಇಂತಹ ಫೈಲ್‌ಗಳನ್ನು ಹರಡಲಾಗುತ್ತಿದೆ.
ಅಪಾಯ ಏನು?
ಒಮ್ಮೆ ಈ APK ಫೈಲ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿದರೆ, ಮೊಬೈಲ್‌ನಲ್ಲಿ ಮಾಲ್‌ವೇರ್ ಸಕ್ರಿಯಗೊಳ್ಳುತ್ತದೆ. ಇದು ಸಾಧನದ ಸಂಪೂರ್ಣ ನಿಯಂತ್ರಣ ಸಾಧಿಸಿ, ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು, ಎಸ್‌ಎಂಎಸ್ (ಸಂದೇಶಗಳು) ಹಾಗೂ ಇತರ ಖಾಸಗಿ ದಾಖಲೆಗಳನ್ನು ಕದಿಯುತ್ತದೆ. ಪರಿಣಾಮವಾಗಿ ಭಾರೀ ಪ್ರಮಾಣದಲ್ಲಿ ಗೊತ್ತಿಲ್ಲದಂತೆ ಖಾತೆಯಿಂದ ಹಣ ಎಗರಿಸುತ್ತದೆ. ಹಾಗೂ ಡೇಟಾ ಕಳುವಾಗುವ ಅಪಾಯವಿರುತ್ತದೆ.
ಇತ್ತೀಚಿನ ತಿಂಗಳುಗಳಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿದ್ದು, ಇದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನಿರಂತರ ಬೆದರಿಕೆಯಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿಅಪರಿಚಿತ ಮೂಲಗಳಿಂದ ಅಥವಾ ವಾಟ್ಸಾಪ್‌ನಲ್ಲಿ ಬಂದಿರುವ ಯಾವುದೇ ಸಂಶಯಾಸ್ಪದ ಎಪಿಕೆ (APK) ಫೈಲ್‌ಗಳನ್ನು ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬೇಡಿ. ಯಾವುದೇ ಫೈಲ್ ತೆರೆಯುವ ಮೊದಲು ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳಿ ಎಂದು ಸೈಬರ್ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement