ಜನಸಂಖ್ಯಾ ಸ್ಫೋಟ-ಸಂಪನ್ಮೂಲದ ಲಭ್ಯತೆ: ಸಮಸ್ಯೆಗಳು-ಕಾರಣಗಳು-ಒಂದು ಅವಲೋಕನ

(ಜುಲೈ ೧೧ ರಂದು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಆ ನಿಮಿತ್ತ ಲೇಖನ)

ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಜನರನ್ನು ಎಚ್ಚರಿಸುವುದು ಮತ್ತು ಜನಸಂಖ್ಯಾ ಸ್ಫೋಟದಿಂದ ಉಂಟಾಗುತ್ತಿರುವ ಬೃಹತ್ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಜನರನ್ನು ಒಂದೇ ವೇದಿಕೆಗೆ ಅಹ್ವಾನಿಸುವುದು ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ.
೧೯೮೯ರಲ್ಲಿ ಮೊಟ್ಟಮೊದಲಬಾರಿಗೆ ಸಂಯುಕ್ತರಾಷ್ಟ್ರಗಳ ಅಭಿವೃದ್ದಿ ಕಾರ್‍ಯಕ್ರಮದ ಆಡಳಿತ ಮಂಡಳಿಯ ವತಿಯಿಂದ ಈ ದಿನವನ್ನು ಆಚರಿಸಲಾಯಿತು. ೧೯೮೭ ರ ಜುಲೈ ೧೧ ರ ಹೊತ್ತಿಗೆ ಜಾಗತಿಕ ಸಂಖ್ಯೆಯು ಸುಮಾರು ೫೦೦ ಕೋಟಿಯಷ್ಟು ತಲುಪಿದಾಗ ಸಾರ್ವಜನಿಕರ ವಿನಂತಿಯ ಮೇರೆಗೆ ಈ ದಿನವನ್ನಾಚರಿಸಲು ಪ್ರಾರಂಭಿಸಲಾಯಿತು. ಜನಸಂಖ್ಯಾ ಶಾಸ್ತ್ರದ ಪಿತಾಮಹ ಎಂದು ಜಾನ್ ಗ್ರ್ಯಾಂಟ್ ಅವರನ್ನು ಕರೆಯಲಾಗುತ್ತಿದೆ. ೧೮೮೧ ರಿಂದ ೧೦ ವರ್ಷಗಳ ಜನಗಣತಿಯನ್ನು ಮಾಡಲಾಗುತ್ತಿದೆ.
ಚಿಕ್ಕ ಹಾಗೂ ಆರೋಗ್ಯವಂತ ಸದೃಢ ಸಮಾಜದ ನಿರ್ಮಾಣಕ್ಕಾಗಿ ಹಾಗೂ ಜನರ ಸುಸ್ಥಿರ ಭವಿಷ್ಯಕ್ಕಾಗಿ ಪ್ರಾಧಿಕಾರದಿಂದ ಒಂದು ದೊಡ್ಡ ಹೆಜ್ಜೆ ಇಡಲಾಯಿತು. ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಬೇಡಿಕೆ ಹಾಗೂ ಪೂರೈಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಹೂಡಿಕೆಗಳನ್ನು ಮಾಡಲಾಯಿತು. ಜನಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಸಂತಾನೋತ್ಪತ್ತಿ ಆರೋಗ್ಯವನ್ನು ಹೆಚ್ಚಿಸಲು ಹಾಗೂ ಸಾಮಾಜಿಕ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಅನೇಕ ಮಹತ್ವದ ಉಪಕ್ರಮಗಳನ್ನು ಕೈಗೊಳ್ಳಲಾಯಿತು.
ಭಾರತದಲ್ಲಿ ೧೯೫೧ ರಿಂದ ೧೯೮೧ ರ ಅವಧಿಯಲ್ಲಿ ಜನಸಂಖ್ಯೆಯು ಗಣನೀಯವಾಗಿ ಏರಿಕೆ ಕಂಡಿತು. ೧೯೫೧ ರಲ್ಲಿ ಸುಮಾರು ೩೬ ಕೋಟಿ ಇದ್ದ ಜನಸಂಖ್ಯೆಯು ೧೯೮೧ ಹೊತ್ತಿಗೆ ಸುಮಾರು ೭೦ ಕೋಟಿಗೆ ಬಂದು ತಲುಪಿತ್ತು. ಅಂದರೆ ಈ ೩೦ ವರ್ಷಗಳ ಕಾಲಾವಧಿಯಲ್ಲಿ ಅಂದಾಜು ೩೪ ಕೋಟಿಯಷ್ಟು ಅಧಿಕವಾಗಿತ್ತು. ಜನಸಂಖ್ಯಾ ಅಂಕಿ- ಅಂಶಗಳ ಇತಿಹಾಸದಲ್ಲಿ ಈ ಹೆಚ್ಚಳವು ಅತ್ಯಂತ ಗಣನೀಯ ಹೆಚ್ಚಳವಾಗಿದೆ. ಅದೇ ರೀತಿ ಪ್ರತಿವರ್ಷ ಜಗತ್ತಿನ ಜನಸಂಖ್ಯೆಯು ಅಂದಾಜು ೧೦೦ ಮಿಲಿಯನ್‌ನಷ್ಟು ಹೆಚ್ಚಳವಾಗುತ್ತಿದೆ.
ಇಂದು ಜಗತ್ತಿನ ಜನಸಂಖ್ಯೆ ೭೭೨ ಕೋಟಿಯನ್ನು ದಾಟುತ್ತಿದೆ. ಚೀನಾ ೧೪೨ ಕೋಟಿಯ ಜನಸಂಖ್ಯೆಯ ಮೊದಲ ಸ್ಥಾನದಲ್ಲಿದ್ದರೆ, ಭಾರತ ೧೩೬.೮ ಕೋಟಿ ಎರಡೇ ಸ್ಥಾನದಲ್ಲಿದೆ. ಅಮೇರಿಕಾ ೩೨ ಕೋಟಿ, ಇಂಡೊನೇಶಿಯಾ ೨೭ ಕೋಟಿ ಜನಸಂಖ್ಯೆಯನ್ನು ಹೊಂದಿದೆ. ೨೧೦೦ ಕೊನೆಗೆ ವಿಶ್ವದ ಜನಸಂಖ್ಯೆ ೧೧೦೦ ಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆಯ ಸಾಮಾಜಿಕ ಮತ್ತು ಆರ್ಥಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ತಿಳಿಸಿದೆ.
ಒಂದು ಅಂದಾಜಿನ ಪ್ರಕಾರ ಜಾಗತಿಕವಾಗಿ ಪ್ರತಿದಿನ ೩,೫೩,೦೦೦ ಶಿಶುಗಳು ಜನಿಸಿದರೆ ೧,೫೩,೦೦೦ ಜನ ಮೃತಪಡುತ್ತಿವೆ.

ಭಾರತದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಪ್ರಮುಖ ಕಾರಣಗಳು :-
ಉಷ್ಣ ವಾತಾವರಣ :- ಭಾರತದಲ್ಲಿನ ಜನಸಂಖ್ಯಾ ಸ್ಫೋಟಕ್ಕೆ ಪ್ರಮುಖ ಕಾರಣಗಳಲ್ಲಿ ಉಷ್ಣ ವಾತಾವರಣವೂ ಒಂದು ಕಾರಣವಾಗಿದೆ. ಇಂತಹ ವಾತಾವರಣದಿಂದಾಗಿ ಬಾಲಕ ಮತ್ತು ಬಾಲಕಿಯರಲ್ಲಿ ಪ್ರಬುದ್ಧತೆ ಬೇಗನೆ ಕಂಡುಬರುವುದರಿಂದ ಅವರು ಅವರು ಸಣ್ಣ ವಯಸ್ಸಿನಲ್ಲಿಯೇ ಮಗುವಿಗೆ ಜನ್ಮ ನೀಡುವ ಸಂಭವನೀಯತೆ ಇರುತ್ತದೆ.
ಬಾಲ್ಯ ವಿವಾಹ ಮತ್ತು ಬಹು ವಿವಾಹ :- ಭಾರತದಲ್ಲಿ ಬಾಲ್ಯ ವಿವಾಹ ಮತ್ತು ಬಹು ವಿವಾಹ ಪದ್ದತಿಗಳು ಅನೇಕ ವರ್ಷದಿಂದ ನಡೆದುಕೊಂಡು ಬಂದಿದೆ. ಸುಮಾರು ೮೦% ಯುವತಿಯರು ತಮ್ಮ ೧೫-೨೦ ವರ್ಷದ ಯುವಾವಸ್ಥೆಯಲ್ಲಿಯೇ ಮದುವೆಯಾಗುತ್ತಾರೆ. ಆದ್ದರಿಂದ ದೀರ್ಘ ವೈವಾಹಿಕ ಜೀವನವು ಹೆಚ್ಚುವರಿ ಮಕ್ಕಳನ್ನು ಪಡೆಯಲು ಕಾರಣವಾಗುತ್ತದೆ

ಧಾರ್ಮಿಕ ಮೂಢ ನಂಬಿಕೆಗಳು :- ಕುಟುಂಬ ಕಲ್ಯಾಣ ವಿಧಾನದಿಂದ ಮಕ್ಕಳ ಜನನವನ್ನು ತಡೆಯುವುದು ಪಾಪದ ಕೆಲಸವೆಂಬ ಮೂಢ ನಂಬಿಕೆ ಇರುವುದರಿಂದ ಜನಸಂಖ್ಯೆ ಸತತ ಏರಿಕೆಗೆ ಕಾರಣವಾಗಿದೆ.
ಅನಕ್ಷರತೆ ಹಾಗೂ ತಿಳಿವಳಿಕೆಯ ಕೊರತೆ :- ಭಾರತದಲ್ಲಿ ಸುಮಾರು ೩೬% ಪುರುಷರು ಹಾಗೂ ೬೧% ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ. ಇವರಿಗೆ ಹೆಚ್ಚು ಮಕ್ಕಳನ್ನು ಹೆರುವುದರಿಂದ ಆಗುವ ಸಮಸ್ಯೆಗಳ ಕುರಿತು ತಿಳುವಳಿಕೆ ಇಲ್ಲ. ಮಕ್ಕಳು ದೇವರು ಕೊಡುವ ಕಾಣಿಕೆ ಎಂದು ನಂಬಿಬಿಟ್ಟಿದ್ದಾರೆ. ಇದು ಕೂಡ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಬಡತನ:- ಬಡತನದಿಂದಾಗಿ ನಮ್ಮ ದೇಶದ ಜನಸಂಖ್ಯೆ ಹಚ್ಚುತ್ತಲಿದೆ. ಅಧಿಕಾಂಶ ಜನರು ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಾರೆ. ಹಾಗಾಗಿ ಮಕ್ಕಳನ್ನು ಹಣಗಳಿಸುವ ಸಾಧನವನ್ನಾಗಿ ಬಳಸುತ್ತಿದ್ದಾರೆ.
ಜನನ ಪ್ರಮಾಣ :- ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಜನನ ಪ್ರಮಾಣ ಹೆಚ್ಚು ಹಾಗೂ ಮದುವೆಯ ಸರಾಸರಿ ವಯಸ್ಸು ಅತ್ಯಂತ ಕಡಿಮೆ.
ಮರಣ ಪ್ರಮಾಣ:- ಭಾರತದಲ್ಲಿ ೧೯೦೦- ೧೯೧೦ ರ ವರೆಗೆ ಮರಣ ಪ್ರಮಾಣ ಪ್ರತಿ ಸಾವಿರಕ್ಕೆ ೩೫-೫೦ ರಷ್ಟಿತ್ತು. ಈಗ ಪ್ರತಿ ಸಾವಿರಕ್ಕೆ ೭-೧೫ ಇದೆ. ಮರಣ ಪ್ರಮಾಣದಲ್ಲಿ ಆಗಿರುವ ಗಣನೀಯ ಇಳಿಕೆಗೆ ಕಾರಣವೆಂದರೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆಯ ಲಭ್ಯತೆ ಮತ್ತು ಮಾರಣಾಂತಿಕ ರೋಗಗಳ ನಿಯಂತ್ರಣ.
ಕುಟುಂಬ ಕಲ್ಯಾಣ ವಿಧಾನಗಳ ಕುರಿತು ತಪ್ಪು ಕಲ್ಪನೆಗಳು:- ಅನಕ್ಷರಸ್ಥರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಲ್ಲಿ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಅದರಲ್ಲೂ ವಿಶೇಷವಾಗಿ ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವಾಸೆಕ್ಟೆಮಿ ಕುರಿತು ಪುರುಷತ್ವ ಹೋಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಹೀಗಾಗಿ ವಾಸೆಕ್ಟಮಿ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಅದೇ ರೀತಿ ಸ್ತ್ರೀಯರೂ ಕೂಡ ಅತ್ಯಂತ ಕಡಿಮೆ ವೆಚ್ಚದ ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸಲು ಆಸಕ್ತಿ ತೋರದಿರುವುದು ಕೂಡ ಜನಸಂಖ್ಯಾ ಸ್ಪೋಟಕ್ಕೆ ಪ್ರಮುಖ ಕಾರಣ.
ವಲಸಿಗರ/ನಿರಾಶ್ರಿತರ ಆಗಮನ:- ೧೯೪೭ ರಲ್ಲಿ ದೇಶ ವಿಂಗಡನೆಯಾದಾಗ ೧ ಕೋಟಿಗಿಂತಲೂ ಹೆಚ್ಚು ವಲಸಿಗರು/ನಿರಾಶ್ರಿತರು ಭಾರತಕ್ಕೆ ಬಂದರು. ೧೯೬೨ ರಲ್ಲಿ ಟಿಬೆಟ್ ಮೇಲೆ ಚೈನಾ ಪ್ರಭಾವ ಹೆಚ್ಚಾದಾಗ ಅಲ್ಲಿಂದಲೂ ಅಧಿಕ ಸಂಖ್ಯೆಯಲ್ಲಿ ವಲಸಿಗರು ಭಾರತಕ್ಕೆ ಬಂದರು. ೧೯೭೧ ರಲ್ಲಿ ಬಾಂಗ್ಲಾದಿಂದ ಮತ್ತು ೧೯೮೦-೯೦ ರ ಅವಧಿಯಲ್ಲಿ ಶ್ರೀಲಂಕಾ ತಮಿಳರ ಸಮಸ್ಯೆಯಿಂದ ಲಕ್ಷಾಂತರ ಜನ ಭಾರತಕ್ಕೆ ವಲಸೆ ಬಂದರು. ಅದೇ ರೀತಿ ಬರ್ಮಾದಿಂದಲೂ ಕೂಡ ವಲಸೆ ಬಂದರು. ಇಂದಿಗೂ ಕೂಡ ಪ್ರಚಲಿತದಲ್ಲಿದೆ. ಈ ಎಲ್ಲ ಕಾರಣಗಳೂ ಕೂಡ ಭಾರತದ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗಿದೆ.

ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳು, ಗರ್ಭಿಣಿಯರ ಅನಾರೋಗ್ಯ ಹಾಗೂ ಸಾವು ನೋವುಗಳಿಗೆ ಪ್ರಮುಖ ಕಾರಣವಾಗಿರುವುದರಿಂದ ಸಮಾಜದ ಜನರ ಸಂತಾನೋತ್ಪತ್ತಿ, ಆರೋಗ್ಯ ಸಮಸ್ಯೆಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದು ಸಂಯುಕ್ತರಾಷ್ಟ್ರ ಅಭಿವೃದ್ಧಿ ಕಾರ್‍ಯಕ್ರಮದ ಆಡಳಿತ ಮಂಡಳಿಯ ಗುರಿಯಾಗಿದೆ.
೧೫-೧೯ ವರ್ಷದೊಳಗಿನ ಹದಿಹರೆಯದವರಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದು ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಈ ವಯಸ್ಸಿನ ಸುಮಾರು ೧೫ ಮಿಲಿಯನ್ ಮಹಿಳೆಯರು ಪ್ರತಿವರ್ಷವೂ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಜನಸಂಖ್ಯಾ ಸ್ಫೋಟದ ಸಮಸ್ಯೆಗಳನ್ನು ಹತ್ತಿಕ್ಕುವ ಸಲುವಾಗಿ ಕೈಜೋಡಿಸುವ ನಿಟ್ಟಿನಲ್ಲಿ ಕೂಡಿ ಒಟ್ಟಾಗಿ ಕೆಲಸ ಮಾಡಲು ಹಾಗೂ ಸಮುದಾಯದ ಜನರ ಗಮನ ಸೆಳೆಯಲು ಜಾಗತಿಕ ಮಟ್ಟದಲ್ಲಿ ವಿವಿಧ ಆರೋಗ್ಯ ಸಂಸ್ಥೆಗಳು ಮತ್ತು ಸರಕಾರದ ವತಿಯಿಂದ ಚರ್ಚಾಕೂಟ, ಶೈಕ್ಷಣಿಕ ಸ್ಪರ್ದಾ ಚಟುವಟಿಕೆಗಳು, ಭಿತ್ತಿ ಪತ್ರಗಳ ವಿತರಣೆ, ಚಿತ್ರಕಲಾ ಸ್ಪರ್ಧೆ, ಘೋಷವಾಕ್ಯಗಳು, ಸಂವಾದಗಳು ಮೊದಲಾದ ಚಟುವಟಿಕೆಗಳನ್ನು ಹಮ್ಮಿ ಕೊಳ್ಳುವುದರ ಮೂಲಕ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.
ಜನಸಂಖ್ಯಾ ಸ್ಫೋಟದಿಂದಾಗಿಗುವ ದುಶ್ಪಪರಿಣಾಮಗಳು ಬಗೆಗೆ ಕಾಳಜಿ ವಹಿಸಿ, ಸರಿಯಾಗಿ ನಿರ್ವಹಿಸಿದಲ್ಲಿ ಬಡತನ, ವಸತಿ, ಉಡುಪು, ಅನಕ್ಷರತೆ, ಅಜ್ಞಾನ, ಅನಾರೋಗ್ಯ, ಅತ್ಯಾಚಾರ, ಅಸುರಕ್ಷತೆ, ಉದ್ಯೋಗ, ಜೀವನಶೈಲಿ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಕುಟುಂಬ ನಿಯಂತ್ರಣ ಯೋಜನೆ, ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಲಿಂಗ-ತಾರತಮ್ಯ ನಿಷೇಧ, ತಾಯಿ-ಮಗುವಿನ ಆರೋಗ್ಯದ ಬಗೆಗೆ ಹೆಚ್ಚು ಜಾಗೃತೆ ವಹಿಸಿದಲ್ಲಿ ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಮಾನವ ಸಂಪನ್ಮೂಲವು ಆರ್ಥಿಕ ಪ್ರಗತಿಗೆ ಕೊಡುಗೆಯೂ ಹೌದು, ಮಿತಿ ಮೀರಿದರೆ ಶಾಪವೂಹೌದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ೨೨೦೦ಕ್ಕೂ ಹೆಚ್ಚಿನ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಉಚಿತವಾಗಿ ನೀಡುತ್ತಿದ್ದು, ಇವುಗಳನ್ನು ಯುವಕರು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.
ಜನಸಂಖ್ಯೆ ಏರಿದಷ್ಟು ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಹಿಂದಿನ ಕಾಲದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಪನ್ಮೂಲವಿರುತ್ತಿತ್ತು. ಅದರೆ ಇಂದು ಸಂಪನ್ಮೂಲಗಳ ಕೊರತೆ ಹೆಚ್ಚಾಗಿದ್ದು, ದೇಶದ ಅಭಿವೃದ್ದಿಯನ್ನು ಕುಂಠಿತಗೊಳಿಸುತ್ತಿದೆ. ಇದರಿಂದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿ, ನಿರುದ್ಯೋಗ, ಬಡತನ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.
ಜನಸಂಖ್ಯೆ ವೃದ್ಧಿಯಲ್ಲಿ ಸ್ಥಿರತೆಯನ್ನು ಸಾಧಿಸದಿದ್ದಲ್ಲಿ ದೇಶದ ಅಭಿವೃದ್ಧಿ ಕಾರ್‍ಯಗಳು ಯಶಸ್ವಿಯಾಗುವುದಿಲ್ಲ. ದೇಶ ಸಂಪದ್ಭರಿತವಾಗಬೇಕೆಂದರೆ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯ. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವುದು ಕೇವಲ ಸರ್ಕಾರ ಮತ್ತು ಸರ್ಕಾರವು ರೂಪಿಸುವ ಕಾನೂನುಗಳಿಂದ ಸಾಧ್ಯವಾಗದು. ಸಾರ್ವಜನಿಕರು ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಅರಿತು ಸ್ವಯಂ ಪ್ರಜ್ಞೆಯಿಂದ ಜನಸಂಖ್ಯಾ ಸ್ಫೋಟದ ನಿಯಂತ್ರಣದಲ್ಲಿ ಸರ್ಕಾರದೊಂದಿಗೆ ಸಕ್ರೀಯವಾಗಿ ಕೈಜೋಡಿಸಬೇಕು. ಹೀಗಾದಾಗ ಮಾತ್ರ ವಿಶ್ವ ಜನಸಂಖ್ಯಾ ದಿನಾಚರಣೆಗೆ ನಿಜವಾದ ಅರ್ಥ ಬಂದು, ಯಶಸ್ವಿಯಾಗುತ್ತದೆ.

– ಬಿ.ಎಸ್.ಮಾಳವಾಡ ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement