ಹುಬ್ಬಳ್ಳಿ: ವಿವಾದಿತ ಪೋಸ್ಟ್​ನಿಂದ ಹಳೇ ಹುಬ್ಬಳ್ಳಿ ಉದ್ವಿಗ್ನ, ಹಲವರ ಬಂಧನ, ನಿಷೇಧಾಜ್ಞೆ ಜಾರಿ

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್‌ ಕಂಡುಬಂದ ನಂತರ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಏ.20ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದೆಲ್ಲೆಡೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಕಿಡಿಗೇಡಿಗಳು  ಶನಿವಾರ ರಾತ್ರಿ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಕಲ್ಲು ತೂರಾಟ ನಡೆಸಿದ್ದು, ನೂರಾರು ಜನರು ಠಾಣೆಯ ಎದುರು ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡುಹಾರಿಸಿದ್ದರು.
ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ಬಿಗಿ ಬಂದೋಬಸ್ತ್ ಹಾಕಲಾಗಿದೆ.

ಹಿಂಸಾಚಾರದಲ್ಲಿ ಇನ್​ಸ್ಪೆಕ್ಟರ್ ಸೇರಿದಂತೆ ಏಳೆಂಟು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಕಿಡಿಗೇಡಿಗಳು ಪೊಲೀಸರನ್ನೇ ಗುರಿಯಾಗಿಸಿ ದಾಳಿ ಮಾಡಿದ್ದರು. ಈ ವೇಳೆ 10ಕ್ಕೂ ಹೆಚ್ಚು ವಾಹನಗಳು ಜಖಂ ಆಗಿವೆ. ಫೋಟೊವೊಂದನ್ನು ಎಡಿಟ್ ಮಾಡಿ ಧಾರ್ಮಿಕ ಕೇಂದ್ರಕ್ಕೆ ಅವಮಾನ ಉಂಟು ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಗಲಭೆಗೆ ಕಾರಣವಾಗಿತ್ತು.
ಹುಬ್ಬಳ್ಳಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಗೊಂಡಿರುವ ಹಿನ್ನೆಲೆಯಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಲಾಬೂರಾಮ್​ ಆದೇಶ ಹೊರಡಿಸಿದ್ದಾರೆ.
ಮಸೀದಿ ಮೇಲೆ ಭಗವಾಧ್ವಜ ಹಾರಿಸಿದಂಥ ವಿಡಿಯೋ ಸ್ಟೇಟಸ್​​ಗೆ ಹಾಕಿಕೊಂಡಿದ್ದರಿಂದ ಇಂಥದ್ದೊಂದು ಗಲಾಟೆಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಹಾರಿಸಿದ ಮಾದರಿಯ ಚಿತ್ರವೊಂದನ್ನು ವ್ಯಕ್ತಿಯೊಬ್ಬ ಹಂಚಿಕೊಂಡಿದ್ದ. ಹಾಗೂ ಅದಕ್ಕೆ ವಿವಾದಾತ್ಮಕ ತಲೆಬರಹ ನೀಡಿದ್ದ. . ಈ ವಿಷಯ ತಿಳಿದ ಕೂಡಲೇ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಯುವಕನನ್ನು ವಶಕ್ಕೆ ಪಡೆದ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಠಾಣೆ ಬಳಿ ಜಮಾಯಿಸಿದ್ದಾರೆ.ಇದನ್ನು ಖಂಡಿಸಿ ಕಲ್ಲುತೂರಾಟ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು. ಗಾಳಿಯಲ್ಲಿ ಗುಂಡು ಹಾರಿಸಿದರು. ಈ ವೇಳೆ ಪೊಲೀಸರ ವಾಹನವನ್ನು ಕಿಡಿಗೇಡಿಗಳ ಗುಂಪು ಜಖಂಗೊಳಿಸಿತು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು. ಹುಬ್ಬಳ್ಳಿ ಉಪನಗರ ಠಾಣೆ ಇನ್ಸ್​ಪೆಕ್ಟರ್​ ವಾಹನ ಜಖಂಗೊಂಡಿತು. ಕೆಲವರು ದಿಡ್ಡಿ ಓಣಿಯ ಗುರುವ ಆಸ್ಪತ್ರೆ ಮೇಲೆಯೂ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪೂರ್ವ ಸಂಚಾರಿ ಠಾಣೆ ಪಿಐ ಕಾಡದೇವರಮಠ ಸೇರಿದಂತೆ ಆರೇಳು ಪೊಲೀಸರಿಗೆ ಗಾಯವಾಯಿತು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement