ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ (PA) ಚಂದ್ರನಾಥ ರಥ್ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಹಂತಕರು ಟೋಲ್ ಗೇಟ್ನಲ್ಲಿ ಮಾಡಿದ ಒಂದು ಸಣ್ಣ ಯುಪಿಐ (UPI) ಪಾವತಿಯನ್ನು ಬೆನ್ನತ್ತಿದ ವಿಶೇಷ ತನಿಖಾ ತಂಡ (SIT)ವು, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೇ 6ರ ರಾತ್ರಿ ಪಶ್ಚಿಮ ಬಂಗಾಳದ ಮಧ್ಯಮಗ್ರಾಮದ ದೋಲ್ತಾಲಾ ಬಳಿ ಈ ಭೀಕರ ಘಟನೆ ನಡೆದಿತ್ತು. ಚಂದ್ರನಾಥ ರಥ್ ಅವರು ತಮ್ಮ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದ್ದಾಗ ಸಂಚು ರೂಪಿಸಿದ್ದ ಹಂತಕರು ಗುಂಡಿನ ದಾಳಿ ನಡೆಸಿದ್ದರು.
ಬೆಳ್ಳಿ ಬಣ್ಣದ ನಿಸ್ಸಾನ್ ಮೈಕ್ರಾ ಕಾರಿನಲ್ಲಿ ಬಂದ ಹಂತಕರು, ನಕಲಿ ನಂಬರ್ ಪ್ಲೇಟ್ ಬಳಸಿ ರಥ್ ಅವರ ಎಸ್ಯುವಿ (SUV) ಕಾರನ್ನು ಅಡ್ಡಗಟ್ಟಿದ್ದರು. ಕಾರು ನಿಲ್ಲುತ್ತಿದ್ದಂತೆಯೇ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಶೂಟರ್ಗಳು, ಸೆಮಿ ಆಟೋಮ್ಯಾಟಿಕ್ ಪಿಸ್ತೂಲ್ನಿಂದ ರಥ್ ಕುಳಿತಿದ್ದ ಕಿಟಕಿಯ ಮೂಲಕ ಸತತ 8 ರಿಂದ 10 ಸುತ್ತು ಗುಂಡು ಹಾರಿಸಿದ್ದರು.
ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಮೂರು ಗುಂಡುಗಳು ತಗುಲಿದ ಪರಿಣಾಮ ಚಂದ್ರನಾಥ ರಥ್ ಅವರು ಆಸ್ಪತ್ರೆಗೆ ಸಾಗಿಸುವ ಮೊದಲೇ ಮೃತಪಟ್ಟರು. ಕಾರು ಚಾಲಕ ಬುದ್ಧದೇವ ಬೆರಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರಿಗೆ ಸಿಕ್ಕ ಮಹತ್ವದ ಸುಳಿವು:
ಈ ಹತ್ಯೆ ಅತ್ಯಂತ ವೃತ್ತಿಪರ ರೀತಿಯಲ್ಲಿ ನಡೆದಿದ್ದರೂ, ಹಂತಕರು ಮಾಡಿದ ಒಂದು ಸಣ್ಣ ತಪ್ಪು ಪೊಲೀಸರ ಪಾಲಿಗೆ ವರದಾನವಾಯಿತು. ಕೊಲ್ಕತ್ತಾ ಸಮೀಪದ ಬಲ್ಲಿ ಟೋಲ್ ಬೂತ್ನಲ್ಲಿ ಹಂತಕರು ತಮ್ಮ ಯುಪಿಐ ಮೂಲಕ ಹಣ ಪಾವತಿಸಿದ್ದರು. ಈ ಡಿಜಿಟಲ್ ಹೆಜ್ಜೆಯನ್ನು ಪತ್ತೆಹಚ್ಚಿದ ಎಸ್ಐಟಿ, ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಉತ್ತರ ಪ್ರದೇಶದ ಅಯೋಧ್ಯಾ ಮತ್ತು ಬಿಹಾರದ ಬಕ್ಸರ್ನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದೆ.
40 ಲಕ್ಷ ರೂಪಾಯಿಯ ಸುಪಾರಿ!
ಪ್ರಾಥಮಿಕ ತನಿಖೆಯ ಪ್ರಕಾರ, ಇದು 40 ಲಕ್ಷ ರೂಪಾಯಿ ಮೊತ್ತದ ‘ಕಾಂಟ್ರಾಕ್ಟ್ ಕಿಲ್ಲಿಂಗ್’ ಎಂದು ತಿಳಿದುಬಂದಿದೆ. ಕೇವಲ 50 ಸೆಕೆಂಡುಗಳಲ್ಲಿ ಇಡೀ ಕಾರ್ಯಾಚರಣೆ ಮುಗಿಸಿದ್ದ ಹಂತಕರಿಗೆ, ರಥ್ ಅವರು ಕಾರಿನ ಯಾವ ಸೀಟಿನಲ್ಲಿ ಕುಳಿತಿರುತ್ತಾರೆ ಎಂಬ ನಿಖರ ಮಾಹಿತಿಯಿತ್ತು. ಇದಕ್ಕಾಗಿ ಅವರು ಹಲವು ದಿನಗಳ ಕಾಲ ಈ ಬಗ್ಗೆ (Reconnaissance) ಪರಿಶೀಲನೆ ನಡೆಸಿದ್ದರು ಮತ್ತು ಓಎಲ್ಎಕ್ಸ್ನಲ್ಲಿ ಸಿಕ್ಕ ಹಳೆಯ ಕಾರು ಹಾಗೂ ಕಳವು ಮಾಡಿದ ಬೈಕ್ ಅನ್ನು ಅವರು ಬಳಸಿದ್ದರು.
ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ನಿಕಟವರ್ತಿಯಾಗಿದ್ದ ಚಂದ್ರನಾಥ ರಥ್ ಅವರು ದನಗಳ ಸಾಗಾಣಿಕೆ (Cattle Smuggling) ಮತ್ತು ಕಲ್ಲಿದ್ದಲು ಮಾಫಿಯಾ ಜಾಲಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ದಾಖಲೆಗಳನ್ನು ನಿರ್ವಹಿಸುತ್ತಿದ್ದರು. ಇದೇ ಕಾರಣಕ್ಕೆ ಅವರ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಇದರ ಹಿಂದಿರುವ ನಿಜವಾದ ಮಾಸ್ಟರ್ಮೈಂಡ್ ಯಾರು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಸ್ತುತ ಆರೋಪಿಗಳನ್ನು ಕೋಲ್ಕತ್ತಾಗೆ ಕರೆತರಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 13 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ