ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ : ಶಿರಸಿ ಸಮಾವೇಶದ 10 ನಿರ್ಣಯಗಳು…

ಶಿರಸಿ: ಪಶ್ಚಿಮ ಘಟ್ಟದ ಜೀವನಾಡಿಗಳಾದ ಬೇಡ್ತಿ, ಅಘನಾಶಿನಿ ಮತ್ತು ಶರಾವತಿ ಕಣಿವೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಹತ್ತು ಪ್ರಮುಖ ನಿರ್ಣಯಗಳನ್ನು ಒಮ್ಮತದಿಂದ ಅಂಗೀಕರಿಸಿದೆ.
* ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಬೇಡ್ತಿ-ಅಘನಾಶಿನಿ ನದಿ ತಿರುವು ಹಾಗೂ ಶರಾವತಿ ಪಂಪ್ ಸ್ಟೋರೇಜ್ ಸೇರಿದಂತೆ ಯಾವುದೇ ಬೃಹತ್ ಜಲವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಬಾರದು. ಈ ಸಂದರ್ಭದಲ್ಲಿ ಎತ್ತಿನಹೊಳೆ ನದಿ ತಿರುವು ಯೋಜನೆಯ ವಿಫಲತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
* ಉತ್ತರ ಕನ್ನಡ ಜಿಲ್ಲೆಯ ಸಂಸದರು, ಶಾಸಕರು, ಮಠಾಧೀಶರು ಸೇರಿದಂತೆ 60 ಗ್ರಾಮ ಪಂಚಾಯತಿಗಳು, 120 ರೈತ ಸಹಕಾರಿ ಸಂಘಗಳು ಹಾಗೂ 55 ಜೀವ ವೈವಿಧ್ಯ ಸಮಿತಿಗಳು ಈ ಯೋಜನೆಗಳು ಪರಿಸರಕ್ಕೆ ಕುತ್ತು ತರಲಿವೆ ಎಂದು ಒಮ್ಮತಾಭಿಪ್ರಾಯ ವ್ಯಕ್ತಪಡಿಸಿವೆ.
* ಪಶ್ಚಿಮ ಘಟ್ಟದ ಪರಿಸರ ಧಾರಣ ಸಾಮರ್ಥ್ಯ ಈಗಾಗಲೇ ಮುಗಿದಿದೆ ಎಂದು ವಿಜ್ಞಾನಿಗಳು ವರದಿ ನೀಡಿರುವುದರಿಂದ, ಸರ್ಕಾರವು ಜನಾಭಿಪ್ರಾಯವನ್ನು ಗೌರವಿಸಿ ಈ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡಬೇಕು. ​
* ಈ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ನೀಡಿದ ಆಶ್ವಾಸನೆಯಂತೆ ನೀರಾವರಿ ತಜ್ಞರು, ಅಧಿಕಾರಿಗಳು ಮತ್ತು ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರ ಸಭೆಯನ್ನು ತಕ್ಷಣವೇ ಆಯೋಜಿಸಬೇಕು.
* ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಮಿತಿಯ ನಿಯೋಗವು ಕೇಂದ್ರ ಪರಿಸರ ಮತ್ತು ನೀರಾವರಿ ಸಚಿವರನ್ನು ಭೇಟಿ ಮಾಡಲು ಕೂಡಲೇ ದಿನಾಂಕ ನಿಗದಿಪಡಿಸಬೇಕು.
* ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರ ನೀಡಿರುವ ಅನುಮತಿಯನ್ನು ತಕ್ಷಣವೇ ರದ್ದುಗೊಳಿಸಬೇಕು.
*  ನದಿ ಕಣಿವೆಗಳಲ್ಲಿ ಯಾವುದೇ ರೀತಿಯ ಸ್ಥಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆಯು ಅನುಮತಿ ನೀಡಬಾರದು ಎಂದು ರಾಜ್ಯ ಅರಣ್ಯ ಸಚಿವರನ್ನು ಸಮಾವೇಶ ಒತ್ತಾಯಿಸಿದೆ.
* ನದಿ ತೀರದ ಜನರ ಕುಡಿಯುವ ನೀರು ಮತ್ತು ಕೃಷಿ ಹಿತದೃಷ್ಟಿಯಿಂದ ವಿಶೇಷ ‘ಜನಸಹಭಾಗಿತ್ವದ ಕಿರು ನೀರಾವರಿ ಯೋಜನೆ’ಯನ್ನು ಸರ್ಕಾರ ಪ್ರಕಟಿಸಬೇಕು.
* ಮಾನವ ಹಕ್ಕುಗಳ ಮಾದರಿಯಲ್ಲಿಯೇ ನದಿಗಳಿಗೂ ‘ಜೀವಿಸುವ ಹಕ್ಕು’ ಹಾಗೂ ‘ನೈಸರ್ಗಿಕ ಸ್ವಚ್ಛ ಹರಿವಿನ ಹಕ್ಕು’ ನೀಡುವ ಕಾನೂನನ್ನು ಜಾರಿಗೆ ತರಲು ಸರ್ಕಾರಗಳು ಮುಂದಾಗಬೇಕು.
*ಸಮಾಜದ ಎಲ್ಲಾ ಸಮುದಾಯಗಳು ಮತ್ತು ಧರ್ಮದವರು ಒಗ್ಗೂಡಿ ಪಶ್ಚಿಮ ಘಟ್ಟದ ಉಳಿವಿಗೆ ಇನ್ನಷ್ಟು ಬಲವಾಗಿ ಅಹಿಂಸಾತ್ಮಕ ಚಳುವಳಿಯನ್ನು ಮುಂದುವರಿಸಲು ಸಮಾವೇಶ ನಿರ್ಧರಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement