ಹುಬ್ಬಳ್ಳಿ | ಅನ್ಯ ಜಾತಿ ಯುವಕನ ಜತೆ ಮದುವೆ: ಗರ್ಭಿಣಿ ಮಗಳನ್ನು ಕೊಂದ ತಂದೆ

ಹುಬ್ಬಳ್ಳಿ :  ಅಂತರ್ಜಾತಿ ವಿವಾಹವಾಗಿದ್ದಕ್ಕೆ ಹೆತ್ತ ತಂದೆಯೇ ಗರ್ಭಿಣಿ ಮಗಳನ್ನು ಭೀಕರವಾಗಿ ಕೊಲೆ  ಮಾಡಿದ ಘಟನೆ ಧಾರವಾಡ  ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ (Hubballi) ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇನಾಂ ವೀರಾಪುರ ಗ್ರಾಮದ ವಿವೇಕಾನಂದ ಮತ್ತು ಅದೇ ಗ್ರಾಮದ ಮಾನ್ಯಾ  ಪ್ರೀತಿಸಿದ್ದರು. ಮಾನ್ಯ ವರೂರು ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯದಲ್ಲಿ ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಇಬ್ಬರಿಗೂ ಮೊದಲು ಪರಿಚಯ ಇದ್ದುದರಿಂದ ಡಿಗ್ರಿ ಓದುವಾಗ ಇನ್​ಸ್ಟಾಗ್ರಾಂನಲ್ಲಿ ಮೆಸೆಜ್ ಮಾಡುತ್ತಾ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಇದು ಗೊತ್ತಾಗಿ ಬೇರೆ ಬೇರೆ ಸಮಾಜದವರಾಗಿದ್ದರಿಂದ ಯುವತಿ ಮನೆಯವರು ಮದುವೆಗೆ ವಿರೋಧ ಮಾಡಿದ್ದರು.
ಆದರೆ, ಯುವತಿ ಯಾವುದೇ ಕಾರಣಕ್ಕೂ ಪ್ರಿಯಕರನನ್ನು ಬಿಟ್ಟು ಬದುಕುವುದಿಲ್ಲ ಎಂದು ಯುವತಿ ಹಠ ಹಿಡಿದಿದ್ದಳಂತೆ. ಧಾರವಾಡದಲ್ಲಿ ಕೋಚಿಂಗ್‍ಗೆ ಹೋಗಿದ್ದ ವಿವೇಕಾನಂದ ಬಳಿ ಹೋಗಿ ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಳಂತೆ. ಹೀಗಾಗಿ ವಿವೇಕಾನಂದ ಆಕೆ ಜೊತೆ ಕಳೆದ ಜೂನ್ 19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದ ಎನ್ನಲಾಗಿದೆ.
ರಾಜಿ ಸಂಧಾನ ಮಾಡಿದ್ದ ಪೊಲೀಸರು
 ನಂತರ ಪೊಲೀಸರು ಎರಡೂ ಕುಟುಂಬಗಳನ್ನು ಕರೆದು ರಾಜಿ ಪಂಚಾಯ್ತಿ ಮಾಡಿದ್ದರು. ಆ ಬಳಿಕ ಮಾನ್ಯಾ ಮತ್ತು ವಿವೇಕಾನಂದ ಊರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರು. ಈ ನಡುವೆ ಮಾನ್ಯಾ ಗರ್ಭಿಣಿಯಾಗಿದ್ದಾಳೆ. 7 ತಿಂಗಳ ಬಳಿಕ ಎಲ್ಲ ಸರಿಹೋಗಿರಬಹುದು ಎಂದುಕೊಂಡು ಡಿಸೆಂಬರ್ 8 ರಂದು ಇಬ್ಬರೂ ಸ್ವಗ್ರಾಮಕ್ಕೆ ವಾಪಸ್ ಬಂದಿದ್ದರು.  ಆದರೆ, ಮತ್ತೆ ಜಗಳ ಶುರುವಾಗಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರನ್ನೂ ಕರೆಸಿ, ರಾಜಿ ಸಂಧಾನ ಮಾಡಿಸಿದ್ದರು ಎನ್ನಲಾಗಿದೆ.  ಆದರೂ ಈ ಕೃತ್ಯ ನಡೆದುಹೋಗಿದೆ.
ಭಾನುವಾರ ಸಂಜೆ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಪ್ರಕಾಶಗೌಡ ಪಾಟೀಲ ಮತ್ತು ಇತರರು ಮಾನ್ಯಾ ಮತ್ತು ಆಕೆಯ ಅತ್ತೆ ಸೇರಿದಂತೆ ಮೂ‌ವರ ಮೇಲೆ ಹಲ್ಲೆ ಮಾಡಿದ್ದಾರೆ. ಮಾನ್ಯಳಿಗೆ ಮಾರಕಾಸ್ತ್ರಗಳಿಂದ ಪ್ರಕಾಶಗೌಡ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡವಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.  ಹುಡುಗನ ತಾಯಿ ಸೇರಿ ಮೂವರು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಎಸ್​​ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement