ಸಂಸತ್ತಿನಲ್ಲಿ ಪೇಪರ್ ಸೋರಿಕೆ ತಡೆ ಮಸೂದೆ ಅಂಗೀಕಾರ; ರಾಷ್ಟ್ರಪತಿ ಅಂಕಿತದ ಬಳಿಕ ಕಾನೂನಾಗಿ ಜಾರಿ

ನವದೆಹಲಿ : ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರೆ ಅಕ್ರಮಗಳನ್ನು ಕಟ್ಟುನಿಟ್ಟಾಗಿ ತಡೆಯುವ ಉದ್ದೇಶದಿಂದ ತರಲಾಗಿರುವ ಸಾರ್ವಜನಿಕ ಪರೀಕ್ಷೆ (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ-2026ಕ್ಕೆ ಸಂಸತ್ತಿನ ಉಭಯ ಸದನಗಳೂ ಅನುಮೋದನೆ ನೀಡಿವೆ.ಇದನ್ನು ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. ಅವರ ಅಂಕಿದ ನಂತರ ಅದು ಕಾನೂನಾಗಿ ಜಾರಿಗೆ ಬರಲಿದೆ.

ಈ ಮಸೂದೆಯನ್ನು ಬುಧವಾರ ಲೋಕಸಭೆ ಅಂಗೀಕರಿಸಿತ್ತು. ಬಳಿಕ ಗುರುವಾರ ರಾಜ್ಯಸಭೆಯಲ್ಲೂ ಅಂಗೀಕಾರ ದೊರೆತಿದೆ. ಈ ಮಸೂದೆಯ ಚರ್ಚೆಯ ವೇಳೆ ಪ್ರತಿಪಕ್ಷ ಸದಸ್ಯರು ಸದನದಿಂದ ಹೊರ ನಡೆದರು(ವಾಕ್‌ಔಟ್).
ಮಸೂದೆಯ ಪ್ರಕಾರ, ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಇತರೆ ಅಕ್ರಮಗಳಲ್ಲಿ ಭಾಗಿಯಾಗುವವರಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿಪಕ್ಷದ  ಟೀಕೆ
ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಯುವ ಸಮೂಹದ ಪ್ರತಿಭಟನೆಯನ್ನು ಸಮಾಧಾನಪಡಿಸುವ ಉದ್ದೇಶದಿಂದ ಮಾತ್ರ ಈ ತಿದ್ದುಪಡಿ ತರಲಾಗಿದೆ; ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನೈಜ ಪ್ರಯತ್ನ ಇದಲ್ಲ ಎಂದು ಆರೋಪಿಸಿದರು.
ಸರ್ಕಾರ ಪರೀಕ್ಷೆಗಳನ್ನು ಹೇಗೆ ನಡೆಸಿದರೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಬಹುದು ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಅವರು ಹೇಳಿದರು. ದಂಡದ ಪ್ರಮಾಣ ಹೆಚ್ಚಿಸುವುದು, ಕಠಿಣ ಶಿಕ್ಷೆ ವಿಧಿಸುವುದು ಅಥವಾ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದರಿಂದ ಮಾತ್ರ ಪೇಪರ್ ಲೀಕ್ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದರು.
ಸಂಸ್ಥೆಗಳು ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಮಾಡದೇ, ಹೊಣೆಗಾರಿಕೆಯನ್ನು ನಿಗದಿಪಡಿಸದೇ ಇದ್ದರೆ ಪ್ರಶ್ನೆಪತ್ರಿಕೆ ಸೋರಿಕೆ ಮುಂದುವರಿಯುತ್ತದೆ. ಆಗ ಇದೇ ವಿಷಯವನ್ನು ಮತ್ತೆ ಸಂಸತ್ತಿನಲ್ಲಿ ಚರ್ಚಿಸಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಖರ್ಗೆ ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   ಇ20 ಪೆಟ್ರೋಲ್‌ನಿಂದ ಎಂಜಿನ್ ಹಾನಿ, ಮೈಲೇಜ್ ಕಡಿಮೆಯಾಗೋದು ಯಾವ ಅಧ್ಯಯನದಲ್ಲೂ ಕಂಡುಬಂದಿಲ್ಲ ; ಸಂಸತ್ತಿಗೆ ತಿಳಿಸಿದ ಕೇಂದ್ರ

‘ಶಿಕ್ಷೆ ಹೆಚ್ಚಿಸಿದರೆ ಮಾತ್ರಕ್ಕೆ ಅಪರಾಧ ನಿಲ್ಲುವುದಿಲ್ಲ’
ಜೆಎಂಎಂ ಸದಸ್ಯೆ ಮಹುವಾ ಮಾಜಿ ಮಾತನಾಡಿ, ಶಿಕ್ಷೆ ಹಾಗೂ ದಂಡದ ಪ್ರಮಾಣ ಹೆಚ್ಚಿಸಿದರೆ ಮಾತ್ರ ಅಪರಾಧಗಳು ನಿಲ್ಲುತ್ತವೆ ಎಂದಾದರೆ ಜಗತ್ತಿನಲ್ಲಿ ಅಪರಾಧಗಳೇ ಇರುತ್ತಿರಲಿಲ್ಲ ಎಂದು ಹೇಳಿದರು. ಅನೇಕ ದೇಶಗಳು ಶಿಕ್ಷೆ ಹೆಚ್ಚಿಸುವುದಕ್ಕಿಂತ ವ್ಯವಸ್ಥೆಯನ್ನು ಸುಧಾರಿಸುವ ಮಾರ್ಗವನ್ನು ಅನುಸರಿಸಿವೆ ಎಂದು ಅವರು ತಿಳಿಸಿದರು.
ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದ ಸಂಜಯ ರಾವತ್ ಮಾತನಾಡಿ, ಇದು “ಹಳೆಯ ಮಸೂದೆಗೆ ಹೊಸ ಶಿಕ್ಷೆಯ ಹೊದಿಕೆ” ಮಾತ್ರ ಎಂದು ಟೀಕಿಸಿದರು. ಶಿಕ್ಷೆ ಹೆಚ್ಚಿಸಿರುವುದನ್ನು ಹೊರತುಪಡಿಸಿ ಯಾವುದೇ ಹೊಸ ಅಂಶ ಇಲ್ಲ; ಇದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು.
ಕಾಂಗ್ರೆಸ್ ಸದಸ್ಯ ಮುಕುಲ್ ವಾಸ್ನಿಕ್ ಮಾತನಾಡಿ, ಸರ್ಕಾರ ಶಿಕ್ಷೆಯ ಬಗ್ಗೆ ಮಾತ್ರ ಮಾತನಾಡುತ್ತಿದೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಮುಂಚಿತವಾಗಿಯೇ ಹೇಗೆ ತಡೆಯಬೇಕು ಎಂಬುದರ ಕುರಿತು ಮಸೂದೆಯಲ್ಲಿ ಯಾವುದೇ ಸ್ಪಷ್ಟ ವ್ಯವಸ್ಥೆ ಇಲ್ಲ ಎಂದು ಹೇಳಿದರು.
ದೇಶದ ವಿವಿಧ ತ್ವರಿತ ನ್ಯಾಯಾಲಯಗಳಲ್ಲಿ ಈಗಾಗಲೇ ಸಾವಿರಾರು ಪ್ರಕರಣಗಳು ಬಾಕಿ ಇರುವುದರಿಂದ, ಹೊಸ ತಿದ್ದುಪಡಿ ಪೇಪರ್ ಲೀಕ್ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಿದೆ ಎಂಬ ವಿಶ್ವಾಸ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರದ ಸಮರ್ಥನೆ
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಸೂದೆಯನ್ನು ಮಂಡಿಸಿ ಮಾತನಾಡಿ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸರ್ಕಾರವು ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.
“ನಮ್ಮ ಮಕ್ಕಳ ಭವಿಷ್ಯವನ್ನು ಯಾರಿಗೂ ಹಾಳು ಮಾಡಲು ಅವಕಾಶ ನೀಡುವುದಿಲ್ಲ ಎಂಬ ಸರ್ಕಾರದ ದೃಢ ಸಂಕಲ್ಪಕ್ಕೆ ಈ ತಿದ್ದುಪಡಿ ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು. ಸರ್ಕಾರ ಇದನ್ನು ಪ್ರತಿಷ್ಠೆಯ ಪ್ರಶ್ನೆ ಮಾಡಿಕೊಳ್ಳುವುದಿಲ್ಲ; ಎಲ್ಲರಿಂದಲೂ ಬರುವ ರಚನಾತ್ಮಕ ಸಲಹೆಗಳನ್ನು ಸ್ವಾಗತಿಸುತ್ತದೆ ಎಂದರು.
ಇದೇ ವೇಳೆ, ಯುಪಿಎ ಆಡಳಿತ ಅವಧಿಯಲ್ಲೂ ಸೇರಿದಂತೆ ವಿವಿಧ ಸರ್ಕಾರಗಳ ಕಾಲದಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಪಟ್ಟಿಯನ್ನು ಸದನದಲ್ಲಿ ಓದಿ ಕೇಳಿಸಿದ ಅವರು, ಇಂತಹ ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವಿಡಿಯೋ | ಜಿಪ್‌ಲೈನ್ ಸಾಹಸ ಸವಾರಿಯಲ್ಲಿ ತಾಂತ್ರಿಕ ದೋಷ : 3500 ಅಡಿ ಆಳದ ಕಂದಕದ ಮೇಲೆ ನೇತಾಡಿದ ಪ್ರವಾಸಿಗ

ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳು
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು.
ಪೇಪರ್ ಲೀಕ್ ಅಥವಾ ಪರೀಕ್ಷೆಯಲ್ಲಿ ಅಕ್ರಮ ಎಸಗಿದವರಿಗೆ ಕನಿಷ್ಠ 5 ವರ್ಷದಿಂದ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಲಕ್ಷದವರೆಗೆ ದಂಡ ವಿಧಿಸಲಾಗುವುದು.
ಸಂಘಟಿತ ಅಪರಾಧಗಳ ಪ್ರಕರಣಗಳಲ್ಲಿ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಕೋಟಿವರೆಗೆ ದಂಡ ವಿಧಿಸುವ ಅವಕಾಶವಿದೆ.
ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಯ ಪ್ರಕಾರ, ಅಕ್ರಮ ತಡೆಗೆ 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ. ಸಂಘಟಿತ ಅಕ್ರಮಗಳಲ್ಲಿ ಭಾಗಿಯಾದವರಿಗೆ 5ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ ₹1 ಕೋಟಿ ದಂಡ ವಿಧಿಸುವ ಅವಕಾಶ ಇದೆ.
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಅಧಿಕಾರ ನೀಡಲಾಗುತ್ತದೆ.
ಆರೋಪಪಟ್ಟಿ ಸಲ್ಲಿಕೆಯಾದ ನಂತರ ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ನಿರ್ದಿಷ್ಟ ಸಂದರ್ಭಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಗೆ ವಿಶೇಷ ಕಾರ್ಯಪಡೆ (Special Task Force) ರಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement