ಬೆಂಗಳೂರು : ರಾಜ್ಯದಲ್ಲಿ ಮುಂದಿನ ಐದಾರು ದಿನಗಳ ಕಾಲ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಬಹುದು ಹಾಗೂ ಇನ್ನೂ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 4ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು -ಸಿಡಿಲಿನಿಂದ ಕೂಡಿದ ಮಳೆಯಾಗಬಹುದು. ಅಲ್ಲದೆ, ಮೇ 7 ಮತ್ತು 8ರಂದು ಚಿಕ್ಕಮಗಳೂರು, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗು- ಸಿಡಿಲಿನಿಂದ ಕೂಡಿದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮೇ 8, 9 ಮತ್ತು 10ರಂದು ಹಗುರವಾಗಿ ಮಳೆಯಾಗಬಹುದು ಎಂದು ತಿಳಿಸಿದೆ.
ಹಲವೆಡೆ ಮಳೆ…
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಜೋರಾಗಿ ಮಳೆಯಾಗಿದೆ. ಅಲ್ಲದೆ, ಬೆಂಗಳೂರು ಗ್ರಾಮೀಣ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳ ಹಲವು ಭಾಗಗಳಲ್ಲಿ ಶುಕ್ರವಾರ ಸಂಜೆ ಮಳೆ ಸುರಿದಿದೆ. ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಗಣಗಲೂರು ಗ್ರಾಮದಲ್ಲಿ ಕುರಿಗಾಹಿ ಮಹಿಳೆಯೊಬ್ಬರು ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರ ಜೊತೆಯಲ್ಲಿದ್ದ 20ಕ್ಕೂ ಅಧಿಕ ಕುರಿಗಳೂ ಸಾವಿಗೀಡಾಗಿವೆ ಎಂದು ಹೇಳಲಾಗಿದೆ.
ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ ಜೋರಾಗಿ ಮಳೆ ಸುರಿದಿದೆ. ಶುಕ್ರವಾರ ಮಧ್ಯಾಹ್ನದವರೆಗೂ ಸುಡು ಬಿಸಿಲಿನ ವಾತಾವರಣವಿದ್ದ ಮೈಸೂರು ಹಾಗೂ ಮಂಡ್ಯದಲ್ಲಿ ಸಂಜೆ 4ರ ಸುಮಾರಿಗೆ ಮೋಡ ಕವಿದು ಮಳೆ ಸುರಿದಿದೆ. ಈ ಎರಡೂ ಜಿಲ್ಲೆಯಲ್ಲಿ ಸುಮಾರು ಒಂದು ತಾಸು ಅಧಿಕ ಧಾರಾಕಾರ ಮಳೆ ಸುರಿದಿದೆ. ಹಲವೆಡೆ ಮರಗಳು ಬಿದ್ದಿವೆ, ಕೆಲವೆಡೆ ಕಂಬಗಳು ಉರುಳಿ ವಿದ್ಯುತ್ ವ್ಯತ್ಯಯವಾಯಿತು. ಹಲವು ಮನೆಗಳ ಕಬ್ಬಿಣದ ಶೀಟ್‌ಗಳು ಹಾರಿ ಹೋಗಿವೆ. ಹಲವೆಡೆ ಆಲಿಕಲ್ಲುಗಳು ಬಿದ್ದ ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ