
ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯದ ಮಸೂದೆಗೆ ವಿಧಾಸಭೆಯಲ್ಲಿ ಅಂಗೀಕಾರ ನೀಡಲಾಗಿದ್ದು, ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ಪಡೆಯುವುದು ಬಾಕಿ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ವಿಧಾನಸಭೆಯಲ್ಲಿ ಮಸೂದೆಗೆ ಒಪ್ಪಿಗೆ ಸಿಕ್ಕಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಯಾರೇ ಮುಂದೆ ಬಂದರೂ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ನೂತನ ವಿವಿಗೆ ಭೂಮಿ ನೀಡಿರುವುದಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ. ಆದರೆ, ಈ ಹಿಂದೆ ಸರ್ಕಾರಗಳು ಆರೋಗ್ಯ, ಶಿಕ್ಷಣ ಮತ್ತು ಕೈಗಾರಿಕೆ ಉದ್ದೇಶಗಳಿಗೆ ಸರಕಾರಿ ಭೂಮಿಯನ್ನು ನೀಡಿದ ಉದಾಹರಣೆಗಳಿವೆ. ಅದರಲ್ಲೂ ಕೆಲ ಸಂಸ್ಥೆಗಳಿಗೆ ಉಚಿತವಾಗಿಯೇ ಭೂಮಿ ನೀಡಿರುವ ನಿದರ್ಶನಗಳೂ ಇವೆ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದರು.
ಸಮಾಜಕ್ಕೆ ಒಳ್ಳೆಯದಾಗುವ ಉದ್ದೇಶದಿಂದ ಮಾತ್ರ ಚಾಣಕ್ಯ ವಿವಿಗೆ ಭೂಮಿ ಮಂಜೂರು ಮಾಡಲಾಗಿದೆಯೇ ವಿನಃ ಲಾಭ ಮಾಡುವ ಉದ್ದೇಶಕ್ಕಲ್ಲ. ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ಅವರು ಹೇಳಿದರು.



ನಿಮ್ಮ ಕಾಮೆಂಟ್ ಬರೆಯಿರಿ