ಬಿಎಸ್‌ವೈ ಆಪ್ತ ಸಹಾಯಕನ ಮನೆ ಸೇರಿ 50ಕ್ಕೂ ಹೆಚ್ಚು ಕಡೆ ಬೆಳ್ಳಂಬೆಳಿಗ್ಗೆ ಐಟಿ ದಾಳಿ..!

ಬೆಂಗಳೂರು: ಬೆಳ್ಳಂಬೆಳಗ್ಗೆ ಕರ್ನಾಟಕ-ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆಯ 300ಕ್ಕೂ ಹೆಚ್ಚು ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಉಮೇಶ್, ಉದ್ಯಮಿಗಳು, ಗುತ್ತಿಗೆದಾರರು ಹಾಗೂ ಲೆಕ್ಕಪರಿಶೋಧಕರ ಕಚೇರಿ ಹಾಗೂ ನಿವಾಸಗಳು ಸೇರಿದಂತೆ 50ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ.
ಬಾಷ್ಯಂ ಸರ್ಕಲ್‍ನಲ್ಲಿರುವ ಉಮೇಶ್ ಅವರ ನಿವಾಸ, ಹೆಗಡೆ ನಗರದಲ್ಲಿರುವ ಎನ್.ಆರ್.ರಾಯಲ್ ಅಪಾರ್ಟ್‍ಮೆಂಟ್‍ನ ಜಲಸಂಪನ್ಮೂಲ ಇಲಾಖೆಯ ಲೆಕ್ಕಪರಿಶೋಧಕರ ಮನೆ ಹಾಗೂ ಸಹಕಾರನಗರದಲ್ಲಿರುವ ರಾಹುಲ್ ಎಂಟರ್ ಪ್ರೈಸಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಹಾಗೂ ಜಪ್ತಿ ಕಾರ್ಯಾಚರಣೆ ನಡೆಸಲಾಗಿದೆ.
ಸಿಮೆಂಟ್, ಕಬ್ಬಿಣದ ಸಗಟು ವ್ಯಾಪಾರ ಸಂಸ್ಥೆಯಾಗಿರುವ ರಾಹುಲ್ ಎಂಟರ್‍ಪ್ರೈಸಸ್ ಜಲಸಂಪನ್ಮೂಲ ಇಲಾಖೆ ಕಾಮಗಾರಿಗಳಲ್ಲಿ ಹೆಚ್ಚಾಗಿ ಭಾಗಿಯಾಗಿರುವ ದೂರುಗಳು ಇದ್ದವು. ಈ ಹಿನ್ನೆಲೆಯಲ್ಲಿ ರಾಹುಲ್ ಎಂಟರ್ ಪ್ರೈಸಸ್ ಸಂಸ್ಥೆಯ ಹಾಗೂ ಜಲಸಂಪನ್ಮೂಲ ಇಲಾಖೆಯ ಲೆಕ್ಕ ಪರಿಶೋಧಕರುಗಳ ಮನೆ ಹಾಗೂ ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ.
ಅಲ್ಲದೆ, ಬೆಂಗಳೂರು ಮೂಲದ ಮತ್ತೊಂದು ಮಾಹಿತಿ ತಂತ್ರಜ್ಞಾನದ ಕಾರ್ಪೋರೇಟ್‌ ಸಂಸ್ಥೆ ಮೇಲೂ ದಾಳಿ ನಡೆಸಲಾಗಿದೆ.
ದೇಶದ ತೆರಿಗೆ ಇಲಾಖೆಯ ಕಣ್ಣುತಪ್ಪಿಸಿ ವಿದೇಶಗಳಲ್ಲಿ ಕಾಪೆರ್ರೇಟ್ ಸಂಸ್ಥೆಗಳು ಹೂಡಿಕೆ ಮಾಡಿದ್ದವು. ರಿಯಲ್ ಎಸ್ಟೇಟ್, ಚಿನ್ನಾಭರಣ, ಹೋಟೆಲ್ ಸೇರಿದಂತೆ ವಿವಿಧ ಸಂಸ್ಥೆಗಳು ಈ ಹೂಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆ ದಾಳಿಯ ಮುಂದುವರೆದ ಭಾಗವಾಗಿ ಇಂದು ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ. ಬೆಳಗ್ಗೆ 5 ಗಂಟೆಗೆ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಜಮಾವಣೆಗೊಂಡ 300ಕ್ಕೂ ಹೆಚ್ಚು ಅಕಾರಿಗಳು 120ಕ್ಕೂ ಹೆಚ್ಚು ಇನ್ನೋವಾ ಕಾರುಗಳಲ್ಲಿ ವಿವಿಧೆಡೆ ದಾಳಿ ನಡೆಸಿದ್ದಾರೆ.
ಅದರಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ದಾಳಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಉಮೇಶ್ ಎಂಬವರು ವಾಸವಿದ್ದ ರಾಜಾಜಿನಗರ ಬಾಷ್ಯಂ ಸರ್ಕಲ್ ಬಳಿ ಮೂರಂತಸ್ತಿನ ಮನೆ ಸೇರಿ ಅವರಿಗೆ ಸಂಬಂಧಿಸಿದ 4 ಕಡೆ ಏಕಕಾಲಕ್ಕೆ ಐಟಿ ದಾಳಿಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪಿಎ ಆಗಿದ್ದ ಉಮೇಶ್​, ಅದಕ್ಕೂ ಮುನ್ನ ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಬಸ್​ ಡಿಪೋದಲ್ಲಿ ಬಿಎಂಟಿಸಿ ಬಸ್​ ಕಂಡಕ್ಟರ್​ ಕಂ ಡ್ರೈವರ್​​​ ಆಗಿದ್ದರು.
ಈ ಹಿಂದೆಯಡಿಯೂರಪ್ಪ ಸರ್ಕಾರದ ವೇಳೆ ಬಿಎಂಟಿಸಿ ನೌಕರಿಯಿಂದ ವಿಆರ್​ಎಸ್ ಪಡೆದುಕೊಂಡಿದ್ದರು ಎನ್ನಲಾಗುತ್ತಿದೆ. ಬಾಷ್ಯಂ ಸರ್ಕಲ್​ ಬಳಿ 10 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇದೇ ಮನೆ ಮೇಲೆ ಗುರುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಉಮೇಶ್ ಅವರು ಮೂಲತಃ ಶಿವಮೊಗ್ಗ ಮೂಲದವರಾಗಿದ್ದು,​ 2008ರಿಂದಲೂ ಯಡಿಯೂರಪ್ಪ ಜತೆ ಆಪ್ತ ಒಡನಾಟ ಇಟ್ಟುಕೊಂಡಿದ್ದಾರೆ. ಕಡತ ವಿಲೇವಾರಿ, ವರ್ಗಾವಣೆಯಂತಹ ಕೆಲಸಗಳ ಜೊತೆಗೆ ನೀರಾವರಿ ಇಲಾಖೆಯಲ್ಲಿಯೂ ವ್ಯವಹಾರ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಇದೆ.

ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement