ಬೆಂಗಳೂರು: ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ವ್ಯಾಲೆಟ್‌ನಿಂದ ಯಾವುದೇ ಬಿಟ್ ಕಾಯಿನ್ ವರ್ಗಾವಣೆ ಆಗಿಲ್ಲ ಮತ್ತು ನಾಪತ್ತೆಯಾಗಿಲ್ಲ ಎಂದು ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಬಿಟ್ ಕಾಯಿನ್ ಹಗರಣ ಜೋರಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸರು ಈ ಸಂಬಂಧ ಸುದೀರ್ಘ ವಿವರಗಳಿರುವ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಯಾವುದೇ ಒತ್ತಡಕ್ಕೆ ಒಳಗಾಗಿ ತನಿಖೆಯ ನಡೆಸಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ, ಅಶೋಕನಗರ ಹಾಗೂ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಅದರಲ್ಲೂ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ನವೆಂಬರ್ ೪ರಂದು ಪ್ರಕರಣವೊಂದು ದಾಖಲಾಗಿತ್ತು. ಓರ್ವ ಆರೋಪಿಯಿಂದ ಸುಮಾರು 500 ಗ್ರಾಂ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಬಂಧನಕ್ಕೆ ಒಳಗಾಗಿದ್ದ ಹತ್ತು ಜನರ ಪೈಕಿ ಶ್ರೀಕೃಷ್ಣ (ಶ್ರೀಕಿ) ಕೂಡ ಒಬ್ಬನಾಗಿದ್ದ. ವಿಚಾರಣೆ ಸಂಬಂಧ ಕ್ರಿಪ್ಟೋ ಕರೆನ್ಸಿ ವೆಬ್ ಸೈಟ್ ಗಳನ್ನ ಹ್ಯಾಕ್ ಮಾಡಿದ್ದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿರುತ್ತಾರೆ. ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಮಾಡಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ವಿಚಾರಣೆಯ ಸಂದರ್ಭದಲ್ಲಿ ತಾನು ಅನೇಕ ಕ್ರಿಪ್ಟೋ ಕರೆನ್ಸಿ ವೆಬ್‌ಸೈಟ್‌ಗಳ ಹ್ಯಾಕಿಂಗ್ ಮಾಡುತ್ತಿದ್ದ ಬಗ್ಗೆ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಕಿಪ್ಟೋ ಕರೆನ್ಸಿಯ ತನಿಖೆಯ ಉದ್ದೇಶಕ್ಕಾಗಿ ಖಾತೆ ತೆರೆಯುವ ಅಗತ್ಯ ಇದ್ದ ಕಾರಣ ಸರ್ಕಾರದ ಅನುಮತಿ ಪಡೆದು ಖಾತೆಯನ್ನು ತೆರಯಲಾಗಿತ್ತು. ಬಿಟ್ ಕಾಯಿನ್ ಗುರುತಿಸುವ ವಶಪಡಿಸಿಕೊಳ್ಳುವ ಪಕ್ರಿಯೆ ಸಂದರ್ಭದಲ್ಲಿ ಶ್ರೀಕಿ ಬಿಟ್ ಕಾಯಿನ್ ವ್ಯಾಲೆಟ್ ತೋರಿಸಿದ್ದು ಅದರಲ್ಲಿ 31.8 ಬಿಟ್ ಕಾಯಿನ್ ಇದ್ದವು. ಸೈಬರ್ ತಜ್ಞರು ಹಾಗೂ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಿಕೊಳ್ಳಲಾಗಿದೆ, ಬಿಟ್ ಕಾಯಿನ್ ಗಳನ್ನು ಪೊಲೀಸ್ ಖಾತೆಗೆ ವರ್ಗ ಮಾಡಿಕೊಳ್ಳಲು ನ್ಯಾಯಾಲಯದ ಅನುಮತಿ ಪಡೆದುಕೊಳ್ಳಲಾಗಿದೆ. ಶ್ರೀಕಿಯ ತನ್ನಲ್ಲಿದ್ದ ಎಲ್ಲ ವ್ಯಾಲೆಟ್ ತೋರಿಸಿದಾಗ 186.811 ಬಿಟ್ ಕಾಯಿನ್ ಪತ್ತೆ ಆಗಿದೆ. ವಿಚಾರಣೆ ವೇಳೆಯಲ್ಲಿ ಆರೋಪಿ ಇದು ನನ್ನ ವೈಯಕ್ತಿಕ ಖಾತೆ ಎಂದು ತಪ್ಪೊಪ್ಪಿಕೊಂಡಿದ್ದ. ಶ್ರೀಕಿ ಬಳಿ ಖಾಸಗಿ ಪಾಸ್‍ವರ್ಡ್ ಇರಲಿಲ್ಲ ಎಂದು ಸೈಬರ್ ತಜ್ಞರ ಸ್ಪಷ್ಟನೆ ನೀಡಿದ್ದು ಎಲ್ಲಾ ದಾಖಲೆಗಳನ್ನು ರೆಕಾರ್ಡ್ ಮಾಡಲಾಗಿದೆ. ಈ ಕುರಿತು ಎಲ್ಲಾ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ತನಿಖೆಯನ್ನು ವೃತ್ತಿಪರ ತಂಡವೇ ತನಿಖೆಯನ್ನು ನಡೆಸಿದೆ. ಬಾಹ್ಯ ತಜ್ಞರು ನಿರಂತರ ಸಮಾಲೋಚನೆ ಹಾಗೂ ಉಪಸ್ಥಿತಿಯಲ್ಲಿಯೇ ನಡೆಸಲಾಗಿದೆ. ಆದರೆ 14,682 ಕದ್ದ ಬಿಟ್‌ಫೈನೆಕ್ಸ್ ಬಿಟ್‌ಕಾಯಿನ್‌ಗಳು ವರ್ಗಾವಣೆ ಮಾಡಿರುವುದು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಸ್ಪಷ್ಟನೆಯನ್ನು ನೀಡಲಾಗಿದೆ.
ಶ್ರೀಕಿಗೆ ಪೊಲೀಸ್ ಕಸ್ಟಡಿಯಲ್ಲಿ ಡ್ರಗ್ಸ್ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪವನ್ನು ತನಿಖಾಧಿಕಾರಿ ಅಲ್ಲಗೆಳೆದಿದ್ದರು. ಆದರೆ ನ್ಯಾಯಾಲಯ ಮೆಡಿಕಲ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಿತ್ತು. ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಯಾಗಿದ್ದರಿಂದ ಅಲ್ಲಿ ಪರೀಕ್ಷೆ ಮಾಡಲು ಆಗಿರಲಿಲ್ಲ. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‍ಎಸ್‍ಎಲ್) ಕಳುಹಿಸಲಾಗಿತ್ತು. ಎಫ್‍ಎಸ್‍ಎಲ್ ಡ್ರಗ್ಸ್ ಸೇವಿಸಿಲ್ಲ ಎಂದು ನೆಗೆಟಿವ್ ರಿಪೋರ್ಟ್ ನೀಡಿತ್ತು. ಅಲ್ಲದೇ ಹೆಬಿಯಸ್ ಕಾರ್ಪಸ್ ಹಾಕಿದ್ದವರ ಮೇಲೂ ನ್ಯಾಯಾಲಯ 5 ಸಾವಿರ ರೂ. ದಂಡ ವಿಧಿಸಿದೆ. ಸದ್ಯಕ್ಕೆ ಮೂರು ಕೇಸ್ ಗಳ ವಿಚಾರಣೆ ನಡೆದಿದ್ದು ಎಲ್ಲಾ ಕೇಸ್ ಗಳು ಪಾರದರ್ಶಕವಾಗಿದೆ. ಶ್ರೀಕಿ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂರು ಪ್ರಕರಣಗಳನ್ನು ಪಾರದರ್ಶಕವಾಗಿ ತನಿಖೆ ಮಾಡಲಾಗುತ್ತಿದೆ.
ಶ್ರೀಕೃಷ್ಣನ ಬಂಧನದ ಕುರಿತು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದಿದ್ದರೂ ಕೂಡ ಸಹ ಯಾವುದೇ ವಿದೇಶಿ ಕಂಪೆನಿಗಳು ಕೂಡ ಹ್ಯಾಕಿಂಗ್ ಬಗ್ಗೆ ಬೆಂಗಳೂರು ಪೊಲೀಸರನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ