ಸರ್ಕಾರದಿಂದ ಮಹತ್ವದ ನಿರ್ಧಾರ… ಪೋಷಕರು 2 ಡೋಸ್ ಲಸಿಕೆ ಪಡೆದಿದ್ರೆ ಮಾತ್ರ ಮಕ್ಕಳಿಗೆ ಶಾಲೆ ಪ್ರವೇಶ, ಮದುವೆಗೆ 500 ಜನರಿಗೆ ಅವಕಾಶ….

ಬೆಂಗಳೂರು: ಕರ್ನಾಟಕದಲ್ಲಿ ಒಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ಸಭಯ ಬಳಿಕೆ ನೂತನ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್​.ಅಶೋಕ್, ಪೋಷಕರು 2 ಡೋಸ್ ಲಸಿಕೆ ಪಡೆದಿದ್ದರೆ ಮಾತ್ರ ಮಕ್ಕಳಿಗೆ ಶಾಲೆ ಪ್ರವೇಶ ನೀಡಲಾಗುವುದು ಎಂದು ಪ್ರಕಟಿಸಿದರು.
ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಮಟ್ಟದ ಪ್ರಕರಣಗಳು ಪತ್ತಯಾಗ್ತಿವೆ ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರಿಗೆ ಮತ್ತು ಮಕ್ಕಳ ಪೋಷಕರಿಗೆ 2 ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ. ಚಿತ್ರಮಂದಿರ, ಮಾಲ್‌ಗಳ ಪ್ರವೇಶಕ್ಕೆ 2 ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ಸಮಾರಂಭಕ್ಕೆ ಅವಕಾಶವಿಲ್ಲ ಸಿನಿಮಾ ಹಾಲ್, ಮಾಲ್‌ನಲ್ಲಿ, ಶಾಲೆಗಳಲ್ಲಿ ಕೆಲಸ ಮಾಡುವವರು ಮತ್ತು ಮಕ್ಕಳ ಪೋಷಕರು 2 ಡೋಸ್ ಕಡ್ಡಾಯವಾಗಿ ಪಡೆದಿರಬೇಕು. ಮದುವೆಗಳಲ್ಲಿ 500ರೊಳಗೆ ಮಾತ್ರ ಜನ ಸೇರಬೇಕು ಎಂದು ಹೇಳಿದರು.
ರಾಜ್ಯದಲ್ಲಿ 2ನೇ ಅಲೆ ವೇಳೆ ಸಿದ್ಧಗೊಂಡಿದ್ದ ಕೋವಿಡ್ ಬೆಡ್, ಐಸಿಯು ಬೆಡ್‌ಗಳನ್ನು ಮತ್ತೆ ಸಿದ್ಧಪಡಿಸಲು ಸೂಚಿಸಲಾಗಿದೆ. ಆಕ್ಸಿಜನ್ ಪ್ಲ್ಯಾಂಟ್ ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಕಂಟ್ರೋಲ್ ರೂಂ ಆರಂಭಿಸಲಾಗುವುದು. ಅದಕ್ಕೆ ಬೇಕಾದ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಔಷಧಿಗಳನ್ನು ಮುಂಚಿತವಾಗಿಯೇ ಖರೀದಿಸುವಂತೆ ಸೂಚಿಸಲಾಗಿದೆ ಎಂದರು.
ಪ್ರತಿನಿತ್ಯ 1 ಲಕ್ಷ ಕೊವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೊವಿಡ್​ ಉಸ್ತುವಾರಿಗಾಗಿ ಶಿಲ್ಪಾ ನಾಗರಾಜ್ ಅವರನ್ನು ಸರ್ವೆಲೈನ್ಸ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕೊವಿಡ್ ಟೆಸ್ಟ್‌ಗೆ 500 ರೂ. ದರ ನಿಗದಿ ಮಾಡಲಾಗಿದೆ. ಅಬೇಟ್‌ ಟೆಸ್ಟ್​ಗೆ ₹ 3 ಸಾವಿರ ನಿಗದಿ ಮಾಡಲಾಗಿದೆ. ಮೊದಲೇ ಸಮಯದ ವೇಳಾಪಟ್ಟಿ ನಿಗದಿ ಮಾಡಿರುತ್ತೇವೆ. ಏರ್‌ಪೋರ್ಟ್‌ನಲ್ಲಿಯೂ ಕಟ್ಟುನಿಟ್ಟಾಗಿ ಕೋವಿಡ್ ಟೆಸ್ಟ್ ನಡೆಸಲಾಗುವುದು. ನೆಗೆಟಿವ್ ವರದಿ ಬಂದ ನಂತರ ಏರ್‌ಪೋರ್ಟ್‌ನಿಂದ ಹೊರಕ್ಕೆ ಕಳಿಸಲಾಗುವುದು ಎಂದರು.
ಪ್ರತ್ಯೇಕ ಮಾರ್ಗಸೂಚಿಗೆ ಸಿಎಂ ಸೂಚನೆ
ಬೆಳಗಾವಿ ಸುವರ್ಣಸೌಧದಲ್ಲಿಯೇ ಅಧಿವೇಶನ ನಡೆಯುತ್ತದೆ. ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸೂಚನೆ ನೀಡಲಾಗಿದೆ. ಕಟ್ಟುನಿಟ್ಟಿನ ನಿಯಮಗಳ ನಡುವೆ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ.
ಓಮಿಕ್ರಾನ್ ಬಗ್ಗೆ ತಜ್ಞರಿಂದ ಬೊಮ್ಮಾಯಿ ಮಾಹಿತಿ ಸಂಗ್ರಹಿಸಿದರು. ಒಮಿಕ್ರಾನ್ ವೈರಸ್‌ನ ತೀವ್ರತೆ ಹೇಗಿರುತ್ತದೆ? ಇದನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ವಿವರಣೆ ನೀಡುವಂತೆ ಮುಖ್ಯಮಂತ್ರಿ ಕೋರಿದರು. ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಿಸಬೇಕು. ಅಭಿಯಾನಕ್ಕೆ ಹೊಸ ವೇಗ ನೀಡಬೇಕು ಎಂದು ತಜ್ಞರು ಸಭೆಯಲ್ಲಿ ಸಲಹೆ ಮಾಡಿದರು.
ಸಚಿವರಾದ ಡಾ.ಕೆ.ಸುಧಾಕರ್, ಆರ್‌. ಅಶೋಕ, ಗೋವಿಂದ ಕಾರಜೋಳ, ಡಾ.ಅಶ್ವತ್ಥ್ ನಾರಾಯಣ, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ತಜ್ಞ ವೈದ್ಯರಾದ ಡಾ.ಎಂ.ಕೆ.ಸುದರ್ಶನ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement