ನವದೆಹಲಿ: ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಫ್ಲೈಟ್ ರೆಕಾರ್ಡರ್ ಎಂದು ಕರೆಯುವ ಬ್ಯ್ಲಾಕ್ ಬಾಕ್ಸ್ ಕೊನೆಗೂ ಪತ್ತೆಯಾಗಿದೆ. ಹೆಲಿಕಾಪ್ಟರ್ ಪತನವಾಗುವುದಕ್ಕೂ ಮೊದಲು ಏನಾಯಿತು ಎಂಬುದು ಇದರಿಂದ ಗೊತ್ತಾಗಲಿದೆ.
ಸೇನಾ ಸಿಬ್ಬಂದಿ ಪಡೆ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಎಂಐ 17ವಿ5 ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಪತನವಾಗಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಉಳಿದ 11 ಸೇನಾಧಿಕಾರಿಗಳು ದುರ್ಮರಣಕ್ಕೀಡಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಅಲ್ಲಿಗೆ ಹಿರಿಯ ಸೇನಾ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹವಾಮಾನವೋ, ತಾಂತ್ರಿಕ ದೋಷವೋ ಅಥವಾ ಪೈಲಟ್ ನಿರ್ಲಕ್ಷ್ಯವೋ ಎಂಬುದು ತನಿಖೆಯ ನಂತರ ಗೊತ್ತಾಗಬೇಕಿದೆ. ಅದನ್ನು ತಿಳಿಯಲು ಹೆಲಿಕಾಪ್ಟರ್ನ ಬ್ಲ್ಯಾಕ್ಸ್ ಬಾಕ್ಸ್ ಸಿಗಬೇಕಿತ್ತು. ನಿನ್ನೆಯಿಂದಲೂತನಿಖಾಧಿಕಾರಿಗಳು ಈ ಬ್ಲ್ಯಾಕ್ ಬಾಕ್ಸ್ಗಾಗಿ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಇಂದು, ಗುರುವಾರ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಈ ಬಾಕ್ಸ್ಗೆ ಫ್ಲೈಟ್ ರೆಕಾರ್ಡರ್ ಎಂದೂ ಕರೆಯುತ್ತಾರೆ.
ತಮಿಳುನಾಡಿನ ಕೂನೂರಿನ ಬಳಿಯ ಕಟ್ಟೇರಿ ಎಂಬ ಗ್ರಾಮದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಸೇನೆಯ ಉನ್ನತ ಅಧಿಕಾರಿಗಳು ಪ್ರಯಾಣ ಮಾಡುವ ಹೆಲಿಕಾಪ್ಟರ್ಗಳನ್ನು ತುಂಬ ಜಾಗರೂಕತೆಯಿಂದ ಮೊದಲೇ ತಪಾಸಣೆ ಮಾಡಲಾಗುತ್ತದೆ. ಹವಾಮಾನದಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದರೂ, ಉನ್ನತಾಧಿಕಾರಿಗಳು ಪ್ರಯಾಣ ಮಾಡುವುದಕ್ಕೂ ಮೊದಲು ಇನ್ನೊಂದು ಹೆಲಿಕಾಪ್ಟರ್ ಆ ಮಾರ್ಗದಲ್ಲಿ ಹೋಗಿ ಚೆಕ್ ಮಾಡುತ್ತದೆ. ಅಂಥದ್ದರಲ್ಲಿ ಸಿಡಿಎಸ್ ಸೇರಿ ಇತರ 11 ಪ್ರಮುಖ ಅಧಿಕಾರಿಗಳು ಇದ್ದ ಹೆಲಿಕಾಪ್ಟರ್ ಪತನವಾಗಿದೆ. ಹೀಗಾಗಿ ಇದಕ್ಕೆ ಕಾರಣ ಹುಡುಕಲು ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಬೇಕಿತ್ತು. ಇಂದು ತನಿಖಾಧಿಕಾರಿಗಳು ತಮ್ಮ ಹುಡುಕಾಟದ ವ್ಯಾಪ್ತಿಯನ್ನು ಘಟನಾ ಸ್ಥಳಕ್ಕಿಂತಲೂ ಒಂದು ಕಿಮೀ ದೂರದವರೆಗೆ ವಿಸ್ತರಿಸಿದ ನಂತರ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಏನಿದು ಬ್ಲ್ಯಾಕ್ ಬಾಕ್ಸ್?
ಬ್ಲ್ಯಾಕ್ ಬಾಕ್ಸ್ ಒಂದು ಉಪಕರಣವಾಗಿದ್ದು, ಇದನ್ನು ಏರ್ಕ್ರಾಫ್ಟ್ನಲ್ಲಿ ಅಳವಡಿಸಲಾಗುತ್ತದೆ. ಹೀಗೆ ಅಪಘಾತಗಳಾದಾಗ ತನಿಖೆಗೆ ಸಹಕಾರವಾಗಲಿ ಎಂಬ ದೃಷ್ಟಿಯಿಂದಲೇ ಇದನ್ನು ಅಳವಡಿಸಲಾಗುತ್ತದೆ. ಇದು ಹಾರ್ಡ್ ಡಿಸ್ಕ್ ಮಾದರಿಯ ಉಪಕರಣವಾಗಿದ್ದು, ಫ್ಲೈಟ್ಗೆ ಸಂಬಂಧಪಟ್ಟ ಎಲ್ಲ ಡಾಟಾಗಳು, ಕಾಕ್ಪಿಟ್ನಲ್ಲಿ ನಡೆಯುವ ಮಾತುಕತೆಗಳನ್ನು ಇದು ರೆಕಾರ್ಡ್ ಮಾಡುತ್ತದೆ. ಸ್ವಯಂ ಚಾಲಿತ ಕಂಪ್ಯೂಟರ್ ಪ್ರಕಟಣೆಗಳು, ರೇಡಿಯೋ ಟ್ರಾಫಿಕ್, ಪ್ರಯಾಣಿಕರು, ಸಿಬ್ಬಂದಿಯ ಮಾತುಕತೆ, ಇಬ್ಬರು ಪೈಲಟ್ಗಳ ನಡುವಿನ ಮಾತುಕತೆ, ಪ್ರಕಟಣಾ ಮಾಹಿತಿ ಇತ್ಯಾದಿಗಳು ಇದರಲ್ಲಿ ರೆಕಾರ್ಡರ್ ಆಗಿರುತ್ತದೆ.. ಹೀಗಾಗಿ ಹೆಲಿಕಾಪ್ಟರ್ ಅಥವಾ ವಿಮಾನ ಪತನವಾದಾಗ ಮೊದಲು ಹುಡುಕುವುದು ಬ್ಲ್ಯಾಕ್ಬಾಕ್ಸ್ ಅನ್ನು. ಈಗ ಪತ್ತೆಯಾದ ಬ್ಲ್ಯಾಕ್ ಬಾಕ್ಸ್ ಬಹಿರಂಗಪಡಿಸಲಿದೆ.
ಬ್ಲ್ಯಾಕ್ ಬಾಕ್ಸ್ ಈಗ ಕಡು ಕಿತ್ತಳೆ ಬಣ್ಣದಲ್ಲಿ ಇರುತ್ತದೆ. ಆದರೆ ಈ ಮೊದಲು ರೆಕಾರ್ಡರ್ ಬಾಕ್ಸ್ ಕಪ್ಪುಬಣ್ಣದಲ್ಲಿಯೇ ಇರುತ್ತಿತ್ತು. ಹಾಗಾಗಿ ಬ್ಲ್ಯಾಕ್ ಬಾಕ್ಸ್ ಎಂದು ಹೆಸರು ಬಂತು. ಇದು ಹೆಚ್ಚಿನ ತಾಪಮಾನ, ತುಕ್ಕು ನಿರೋಧಕವಾಗಿದ್ದು, ಸ್ಟೇನ್ಲೆಸ್ ಸ್ಟೀಲ್ ಕಂಟೇನರ್ನಲ್ಲಿ ಎರಡು ಹೊದಿಕೆಯಲ್ಲಿ ಸುತ್ತಿಡಲಾಗುತ್ತದೆ. ಈ ಕಪ್ಪು ಪೆಟ್ಟಿಗೆಗಳು ಬರೀ ಭೂಮಿ ಮೇಲೆ ಬಿದ್ದರಷ್ಟೇ ಅಲ್ಲ, ಸಮುದ್ರದಲ್ಲಿ ಬಿದ್ದರೂ ಹಾಳಾಗದಂತೆ ಇದನ್ನು ವಿನ್ಯಾಸಗೊಳಿಸಲಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ