ನವದೆಹಲಿ: ಕೃಷಿ ಕಾನೂನುಗಳು (ಈಗ ರದ್ದಾದ) ಮತ್ತು ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನಾತ್ಮಕ ಖಾತರಿ ಸೇರಿದಂತೆ ಇತರ ವಿಷಯಗಳ ವಿರುದ್ಧ 15 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 11, ಶನಿವಾರದಂದು ತಮ್ಮ ಪ್ರತಿಭಟನೆ ಕೊನೆಗೊಳಿಸಿ ಮನೆಗೆ ಹಿಂದಿರುಗುವುದಾಗಿ ಘೋಷಿಸಿದ್ದಾರೆ.
ರೈತ ಸಂಘಗಳು ಇಂದು ಸಂಜೆ 5:30 ಕ್ಕೆ ಫತೇಹ್ ಅರ್ದಾಸ್ (ವಿಜಯ ಪ್ರಾರ್ಥನೆ) ಮತ್ತು ಡಿಸೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ದೆಹಲಿಯ ಗಡಿಯಲ್ಲಿರುವ ಸಿಂಘು ಮತ್ತು ಟಿಕ್ರಿ ಪ್ರತಿಭಟನಾ ಸ್ಥಳಗಳಲ್ಲಿ ಫತೇಹ್ ಮಾರ್ಚ್ (ವಿಜಯ ಮೆರವಣಿಗೆ) ಬಗ್ಗೆ ಯೋಜಿಸಿವೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ಕೃಷಿ ನಾಯಕರು ಡಿಸೆಂಬರ್ 13 ರಂದು ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಪೂಜೆ ಸಲ್ಲಿಸಲು ಯೋಜಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಡಿಸೆಂಬರ್ 15 ರಂದು ದೆಹಲಿಯಲ್ಲಿ ಮತ್ತೊಂದು ಸಭೆ ನಡೆಸಲಿದೆ.
ನವೆಂಬರ್ 21 ರಂದು ಎಸ್‌ಕೆಎಂನಿಂದ ಆರು ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದ ನಂತರ ಕೇಂದ್ರವು ನಿನ್ನೆ, ಬುಧವಾರ ಎಸ್‌ಕೆಎಂನ ಐದು ಸದಸ್ಯರ ಸಮಿತಿಗೆ ಲಿಖಿತ ಕರಡು ಪ್ರಸ್ತಾವನೆಯನ್ನು ಕಳುಹಿಸಿದೆ.
ಕೇಂದ್ರವು ತನ್ನ ಕೊಡುಗೆಯ ಭಾಗವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಸ್ಯೆಯನ್ನು ನಿರ್ಧರಿಸಲು ಸಮಿತಿ ರಚಿಸಲು ಒಪ್ಪಿಕೊಂಡಿದೆ. ಸಮಿತಿಯು ಸರ್ಕಾರಿ ಅಧಿಕಾರಿಗಳು, ಕೃಷಿ ತಜ್ಞರು ಮತ್ತು ಈ ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘಗಳ ಛತ್ರಿ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ.
ರೈತರ ವಿರುದ್ಧದ ಎಲ್ಲಾ ಪೋಲೀಸ್ ಪ್ರಕರಣಗಳನ್ನು ಕೈಬಿಡಲು ಕೇಂದ್ರವು ಒಪ್ಪಿಗೆ ನೀಡಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ರೈತರ ಮೇಲಿನ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಲಾಗುವುದು ಎಂದು ರೈತರಿಗೆ ಭರವಸೆ ನೀಡಿದೆ ಮತ್ತು ಅದೇ ರೀತಿ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದೆ.
ಹರ್ಯಾಣ ಮತ್ತು ಉತ್ತರ ಪ್ರದೇಶಗಳು ತಮ್ಮ ಪ್ರಾಣ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ತಾತ್ವಿಕ ಒಪ್ಪಿಗೆ ನೀಡಿದ್ದು, ಪಂಜಾಬ್ ಈಗಾಗಲೇ ಘೋಷಣೆ ಮಾಡಿದೆ ಎಂದು ಕೇಂದ್ರದ ಪತ್ರದಲ್ಲಿ ತಿಳಿಸಲಾಗಿದೆ.
ರೈತರ ಮೇಲೆ ಪರಿಣಾಮ ಬೀರುವ ಸೆಕ್ಷನ್‌ಗಳ ಬಗ್ಗೆ ಎಸ್‌ಕೆಎಂ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರವೇ ವಿದ್ಯುತ್ ಬಿಲ್ ಸಹ ಪರಿಚಯಿಸಲಾಗುತ್ತದೆ ಎಂದು ತಿಳಿಸಿದೆ.
ಕಳೆದ ವಾರ, ಬಾಕಿ ಇರುವ ಸಮಸ್ಯೆಗಳನ್ನು ಚರ್ಚಿಸಲು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ (ಫೋನ್ ಕರೆ ಮೂಲಕ) ಮಾತನಾಡಲಾಯಿತು ಎಂದು ರೈತರು ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರು ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ಪ್ರತಿಭಟನೆಯ ಸಮಯದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳು ಮತ್ತು ಹುಲ್ಲು ಸುಡುವಿಕೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದ ನಂತರವೇ ನಾವು ಮನೆಗೆ ಹೋಗುತ್ತೇವೆ ಎಂದು ಪ್ರತಿಪಾದಿಸಿದರು. ಮೀಸಲಾತಿಗಾಗಿ 2016 ರ ಜಾಟ್ ಆಂದೋಲನವನ್ನು ಉಲ್ಲೇಖಿಸಿದ ಅವರು, ಭರವಸೆ ನೀಡಿದ ನಂತರವೂ ಕಾನೂನು ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ