ಬೆಳಗಾವಿಯಲ್ಲಿ ಎಂಇಎಸ್‌ ಪುಂಡರ ಅಟ್ಟಹಾಸ: ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ: 144 ಸೆಕ್ಷನ್‌ ಜಾರಿ

ಬೆಳಗಾವಿ: ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ತಡರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ.
ಮಧ್ಯರಾತ್ರಿ ದುಷ್ಕರ್ಮಿಗಳು ಆಗಮಿಸಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಹಾನಿಪಡಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿಗೊಳಿಸಿ ದುಷ್ಕೃತ್ಯವೆಸಗಿದ್ದಾರೆ. ಸ್ಥಳಕ್ಕೆ ಟೀಳಕವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ವಿವಿಧ ಸ್ಥಳಗಳಲ್ಲಿ ಕಲ್ಲು ತೂರಾಟ ಮತ್ತು ವಾಹನಗಳಿಗೆ ಹಾನಿ ಮಾಡಿದ್ದಕ್ಕಾಗಿ ಕ್ಯಾಂಪ್, ಖಡೇ ಬಜಾರ್, ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಒಟ್ಟು 3 ಪ್ರಕರಣ ದಾಖಲಾಗಿವೆ ಹಾಗೂ 27 ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬೆಳಗಾವಿ ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ಕೆಲ ಕಾನೂನು ಬಾಹಿರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸ್ ಕಮಿಷನರೇಟ್ ಪ್ರದೇಶಕ್ಕೆ (ಬೆಳಗಾವಿ ತಾಲೂಕು) ಸೆಕ್ಷನ್ 144 ಮಾಡಲಾಗಿದ್ದು, ಇಂದು ಬೆಳಗ್ಗೆ 8 ಗಂಟೆಯಿಂದ ಭಾನುವಾರ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಬೆಳಗಾವಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಹಾನಿ..
ಅನಗೋಳದಲ್ಲಿ ಶುಕ್ರವಾರ ಮಧ್ಯರಾತ್ರಿ ಸ್ವಾತಂತ್ರ್ಯವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಲಾಗಿದೆ. ರಾಯಣ್ಣನ ಮುಖ ಭಗ್ನಗೊಳಿಸಿ ಕೈಯಲ್ಲಿದ್ದ ಖಡ್ಗ ಮುರಿದು ಹಾಕಿದ್ದಾರೆ. ನಂತರ ವಿಷಯ ತಿಳಿದ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಈ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿವಿಧ ಜಯಂತಿಗಳಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅಂಗಳದಲ್ಲಿ ನಿಲ್ಲಿಸಿದ್ದ ವೇಳೆ ತಡರಾತ್ರಿ 2:30ರ ಸುಮಾರಿಗೆ ಆಗಮಿಸಿದ ಕಿಡಿಗೇಡಿಗಳು ಮೂರ್ತಿಯನ್ನು ಹಾನಿಗೊಳಿಸಿದ್ದಾರೆ.
ಸಂಭಾಜಿ ವೃತ್ತದಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದು ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೆ ಕಲ್ಲುತೂರಾಟ ಮಾಡಿದ್ದಾರೆ. ಅಧಿವೇಶನದ ಕರ್ತವ್ಯಕ್ಕೆ ಬಂದಿದ್ದ ವಾಹನಗಳ ಮೇಲೂ ಕಲ್ಲೆಸೆಯಲಾಗಿದೆ. ಲಾಡ್ಜ್ ಬಳಿ ನಿಲ್ಲಿಸಿದ್ದ 6 ಸರ್ಕಾರಿ ಕಾರುಗಳ ಮೇಲೆ ಉದ್ದೇಶಪೂರ್ವಕವಾಗಿ ಕಲ್ಲುತೂರಿ ಪುಂಡರು ಅಟ್ಟಹಾಸ ತೋರಿದ್ದಾರೆ. ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಕಿಡಗೇಡಿಗಳು ಬಿಯರ್ ಬಾಟಲ್ ಒಡೆದು ಕಲ್ಲು ತೂರಿದ್ದಾರೆ. ಕಿಡಗೇಡಿಗಳು ಕರ್ನಾಟಕ ಸರ್ಕಾರ ಎಂದು ಇರುವ ಬೋರ್ಡ್ ಗಳನ್ನ ಕಿತ್ತು ತೆಗೆದುಕೊಂಡು ಹೋಗಿದ್ದಾರೆ. ಬೆಳಗಾವಿಯಲ್ಲಿ ಇನ್ನೂ ಪುಂಡರ ಅಟ್ಟಹಾಸ ಮುಂದುವರೆದಿದ್ದು ಯುವಕರು ಗಲ್ಲಿ ಗಲ್ಲಿಗಳಲ್ಲಿ ಗುಂಪು ಗುಂಪಾಗಿ ನಿಂತಿರುವ ದೃಶ್ಯ ಕಂಡುಬಂದಿದೆ.

ಪ್ರಮುಖ ಸುದ್ದಿ :-   ಭಾರಿ ಮಳೆ : ಉತ್ತರ ಕನ್ನಡ ಜಿಲ್ಲೆ 4 ತಾಲೂಕುಗಳ ಶಾಲೆಗಳಿಗೆ ನಾಳೆ (ಜುಲೈ 4)ರಜೆ ಘೋಷಣೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement