ವೀಡಿಯೊ..| ಎಲ್ಲಾ ಬುರುಡೆ..ಎಲ್ಲಾ ಬುರುಡೆ, ವಧು ಅನ್ನೋದು ಬುರುಡೆ..ವರ ಅನ್ನೋದು ಬುರುಡೆ : 568 ಜೋಡಿ ನಕಲಿ ಸಾಮೂಹಿಕ ವಿವಾಹ ಕಾರ್ಯಕ್ರಮ, 15 ಜನರ ಬಂಧನ

ಬಲಿಯಾ: ಮುಖ್ಯಮಂತ್ರಿ ಸಾಮೂಹಿಕ ವಿವಾಹ ಸ್ಕೀಮ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಉತ್ತರ ಪ್ರದೇಶದಲ್ಲಿ ವಿವಾಹ ವಂಚನೆಯಲ್ಲಿ ತೊಡಗಿದ್ದಕ್ಕಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ. ಬುಧವಾರ ಮೊದಲ ಬಾರಿಗೆ ವರದಿಯಾದ ಈ ಹಗರಣದಲ್ಲಿ ನಕಲಿ ಸಾಮೂಹಿಕ ವಿವಾಹದಲ್ಲಿ ವಧುಗಳು ಹಾರ ಬದಲಾಯಿಸುವುದನ್ನು ಚಿತ್ರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಿಯಾ ಜಿಲ್ಲೆಯಲ್ಲಿ ಜನವರಿ 25 ರಂದು ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸುಮಾರು 568 ಜೋಡಿಗಳು ವಿವಾಹವಾದವು ಎಂದು ಅಧಿಕಾರಿಗಳು ಹೇಳುತ್ತಾರೆ, ಆದಾಗ್ಯೂ, ನಂತರ ಇದು ನಕಲಿ ಸಾಮೂಹಿಕ ವಿವಾಹ ಎಂಬುದು ಬೆಳಕಿಗೆ ಬಂದಿದೆ. ಸಾಮೂಹಿಕ ವಿವಾಹ ನಡೆಸಲು ವಧು ಮತ್ತು ವರರಂತೆ ಪೋಸ್ ನೀಡಲು ಹಲವರಿಗೆ ಹಣ ನೀಡಲಾಗಿದೆ ಎಂಬುದು ಕಂಡುಬಂದಿದೆ.

ಅಲ್ಲದೆ, ಈ ನಕಲಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ವಧು-ವರರಂತೆ ನಟಿಸಲು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ 500 ರೂ.ಗಳಿಂದ 2,000 ರೂ.ಗಳ ವರೆಗೆ ಹಣ ನೀಡಲಾಗಿದೆ ಎಂದು ನಿವಾಸಿಗಳು ಬಹಿರಂಗಪಡಿಸಿದ್ದಾರೆ. ಕೆಲವು ಪುರುಷರು ಮದುವೆ ಗಂಡಿನಂತೆ ವೇಷ ಧರಿಸಿ, ತಮ್ಮ ಮುಖಗಳನ್ನು ಮರೆಮಾಚಿ ನಟಿಸಿರುವುದನ್ನು ವೀಡಿಯೊ ದೃಶ್ಯಗಳು ತೋರಿಸುತ್ತವೆ.
“ಕೆಲವು ಮಹಿಳೆಯರಿಗೆ ವರನೇ ಇರಲಿಲ್ಲ. ಅವರೇ ತಮಗೆ ತಾವೇ ವರಮಾಲೆ (ಮಾಲೆ) ಧರಿಸಿದ್ದರು. ಜನರಿಗೆ ₹ 500 ರಿಂದ ₹ 2,000 ವರೆಗೆ ವೇತನ ನೀಡಲಾಗುತ್ತಿದೆ ಎಂದು ನಮಗೆ ತಿಳಿದು ಬಂದಿದೆ ಎಂದು ವಿಮಲಕುಮಾರ ಪಾಠಕ್ ಹೇಳಿದ್ದಾರೆ.
19 ವರ್ಷದ ಯುವಕನೊಬ್ಬ, ತನಗೆ ವರನಾಗಿ ಪೋಸ್ ಕೊಡಲು ಹಣದ ಆಮಿಷ ಒಡ್ಡಿದ್ದರು ಎಂದು ಎನ್‌ಡಿಟಿವಿಗೆ ಹೇಳಿದ್ದಾನೆ. “ನಾನು ಮದುವೆಯನ್ನು ನೋಡಲು ಅಲ್ಲಿಗೆ ಹೋಗಿದ್ದೆ. ಅವರು ನನ್ನನ್ನು ಅಲ್ಲೇ ಕೂಡ್ರಿಸಿದರು. ಅವರು ನನಗೆ ಹಣ ನೀಡುವುದಾಗಿ ಹೇಳಿದರು. ನನ್ನಂತೆ ಹಲವರನ್ನು ಕೂಡ್ರಿಸಲಾಯಿತು” ಎಂದು ಆತ ಹೇಳಿದ್ದಾನೆ.

ಮದುವೆ ಆದವರಿಗೇ ಮತ್ತೆ ಮದುವೆ ..!
ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಲ್ಲಿ ವಂಚನೆ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಹಾಗೂ ಎಂಟು ಫಲಾನುಭವಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜ.25ರಂದು ಮಣಿಯಾರ್ ಇಂಟರ್ ಕಾಲೇಜಿನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈಗಾಗಲೇ ಮದುವೆಯಾಗಿದ್ದ ಅನೇಕರು ಮತ್ತೆ ಮದುವೆಯಾಗಿದ್ದಾರೆ ಎನ್ನಲಾಗಿದೆ.
ಸಮುದಾಯ ವಿವಾಹದಲ್ಲಿ ಬಿಜೆಪಿ ಶಾಸಕ ಕೇತ್ಕಿ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಪಾದಿತ ವಂಚನೆಯಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಕಾರ್ಯಕ್ರಮಕ್ಕೆ ಕೇವಲ ಎರಡು ದಿನಗಳ ಮೊದಲು ಅವರು ನನಗೆ ಮಾಹಿತಿ ನೀಡಿದ್ದರು. ಏನೋ ಮೋಸ ಇದೆ ಎಂದು ನನಗೆ ಅನುಮಾನವಿತ್ತು. ಆದರೆ ಈಗ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

ಸರ್ಕಾರಿ ವೆಬ್‌ಸೈಟ್ ಪ್ರಕಾರ, ಈ ಯೋಜನೆಯಡಿ ಸರ್ಕಾರವು ₹ 51,000 ನೀಡುತ್ತದೆ, ಇದರಲ್ಲಿ ₹ 35,000 ಹುಡುಗಿಗೆ, ₹ 10,000 ಮದುವೆಯ ಸಾಮಗ್ರಿಗಳನ್ನು ಖರೀದಿಸಲು ಮತ್ತು ₹ 6,000 ಕಾರ್ಯಕ್ರಮಕ್ಕೆ ಹೋಗುತ್ತದೆ.
ಆರೋಪಿಗಳಿಗೆ ಹಣ ವರ್ಗಾವಣೆಯಾಗುವ ಮುನ್ನವೇ ಈ ಹಗರಣ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ನಾವು ಈ ವಿಷಯದ ಬಗ್ಗೆ ತನಿಖೆ ನಡೆಸಲು ಮತ್ತು ಎಲ್ಲಾ ಫಲಾನುಭವಿಗಳ ಬಗ್ಗೆ ಪರಿಶೀಲಿಸಲು ನಾವು ತಕ್ಷಣ ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ಸಂಪೂರ್ಣ ತನಿಖೆ ಮುಗಿಯುವ ವರೆಗೆ ಯಾವುದೇ ಪ್ರಯೋಜನಗಳನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement