ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ : ಜೆಡಿಯು ಸೇರಲಿರುವ ನಿತೀಶ ಪುತ್ರ ನಿಶಾಂತ; ಮುಂದಿನ ಡಿಸಿಎಂ ?

ಪಾಟ್ನಾ: ಬಿಹಾರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ನಿತೀಶಕುಮಾರ ಅವರ ಪುತ್ರ ನಿಶಾಂತಕುಮಾರ ಅವರು ಶನಿವಾರ ಅಧಿಕೃತವಾಗಿ ಜನತಾ ದಳ (ಯುನೈಟೆಡ್) ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ಅಷ್ಟೇ ಅಲ್ಲದೆ, ಅವರು ಬಿಹಾರದ ಮುಂದಿನ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಸಂಜಯ ಕುಮಾರ ಝಾ ಶುಕ್ರವಾರ ನಡೆದ ಪ್ರಮುಖ ಸಭೆಯಲ್ಲಿ ಸುಳಿವು ನೀಡಿದ್ದಾರೆ.
ನಿತೀಶಕುಮಾರ ಅವರು ಗುರುವಾರ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನಿಶಾಂತ ಅವರು ಸಕ್ರಿಯ ರಾಜಕೀಯಕ್ಕೆ ಬರಬೇಕೆಂದು ಜೆಡಿಯು ಕಾರ್ಯಕರ್ತರು ಮತ್ತು ನಾಯಕರು ದೀರ್ಘಕಾಲದಿಂದ ಒತ್ತಾಯಿಸುತ್ತಿದ್ದರು. ಶುಕ್ರವಾರದ ಸಭೆಯಲ್ಲಿ ಈ ಬೇಡಿಕೆ ಮತ್ತೊಮ್ಮೆ ಕೇಳಿಬಂದಿದ್ದು, ನಿತೀಶಕುಮಾರ ಅವರಿಗೆ ನಿಶಾಂತ ಅವರೇ ಸೂಕ್ತ ಉತ್ತರಾಧಿಕಾರಿ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ?:
ನಿತೀಶಕುಮಾರ ಅವರು ಸಂಸತ್ತಿನ ಮೇಲ್ಮನೆಗೆ (ರಾಜ್ಯಸಭೆ) ತೆರಳುತ್ತಿರುವುದರಿಂದ, ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಮುಖ್ಯಮಂತ್ರಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ, ಇದೇ ವೇಳೆ ನಿಶಾಂತ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆ ದಟ್ಟವಾಗಿದೆ.
ಜೆಡಿಯು ನಾಯಕತ್ವದ ಚರ್ಚೆ: ಪಕ್ಷದಲ್ಲಿ ಒಡಕು ಉಂಟಾಗುವುದನ್ನು ತಪ್ಪಿಸಲು ನಿತೀಶ ಅವರೇ ಜೆಡಿಯು ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಕೆಲವು ನಾಯಕರು ಒತ್ತಾಯಿಸಿದ್ದಾರೆ. ಇನ್ನುಳಿದಂತೆ ಕೇಂದ್ರ ಸಚಿವ ಲಲ್ಲನ್ ಸಿಂಗ್, ಬಿಹಾರ ಸಚಿವರಾದ ಅಶೋಕ್ ಚೌಧರಿ, ವಿಜಯ ಚೌಧರಿ ಮತ್ತು ಸಂಜಯಕುಮಾರ ಝಾ ಅವರ ಹೆಸರುಗಳೂ ಪಕ್ಷದ ಉನ್ನತ ಹುದ್ದೆಗೆ ಕೇಳಿಬರುತ್ತಿವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement