ಕುಮಟಾ : ಇತಿಹಾಸ ತಜ್ಞ ಡಾ. ಎಲ್. ಜಿ. ಭಟ್ಟ ನಿಧನ

ಕುಮಟಾ : ನಿವೃತ್ತ ಪ್ರಾಧ್ಯಾಪಕ ಹಾಗೂ ಇತಿಹಾಸ ಮತ್ತು ಶಿಕ್ಷಣ ತಜ್ಞರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನ ಡಾ. ಎಲ್. ಜಿ. ಭಟ್ಟ (83) ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಕಾರ್ಕಳದ ಭುವನೇಂದ್ರ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ವರ್ಗಾವಣೆ ನಂತರ ಹೊನ್ನಾವರದ ಎಸ್. ಡಿ. ಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಸಾಹಿತ್ಯ ಹಾಗೂ ಇತಿಹಾಸ ಕ್ಷೇತ್ರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರು ಹಾಲಕ್ಕಿ ಜನಾಂಗ ಸಂಪ್ರದಾಯ, ಅವರ ಆಚಾರ, ಜೀವನ ಕ್ರಮದ ಕುರಿತು ಕೃತಿಗಳನ್ನು ರಚಿಸಿದ್ದಾರೆ. ‘ಹಾಲಕ್ಕಿ ಪಾಯಸ ‘ ಎಂಬ ಕೃತಿಯು ಹಾಲಕ್ಕಿ ಸಮುದಾಯದವರ ಜೀವನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ. ಹೊಸದಿಗಂತ ದಿನಪತ್ರಿಕೆಯಲ್ಲಿ ಕಾರ್ಕಳ ಮತ್ತು ಹೊನ್ನಾವರದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ವಿವಿಧ ಪತ್ರಿಕೆಗಳಲ್ಲಿ ಇವರು ಬರೆದ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದ್ದವು.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

ಇತಿಹಾಸ ವಿಷಯದಲ್ಲಿ ಅಪಾರ ಜ್ಞಾನ ಹೊಂದಿದ್ದ ಅವರು ಜಿಲ್ಲೆಯ ಸ್ಮಾರಕಗಳು, ಅರಬ್ಬಿ ಸಮುದ್ರದಲ್ಲಿರುವ ನಡುಗಡ್ಡೆಗಳು, ಕೋಟೆಗಳ ಬಗ್ಗೆ ವಿಶೇಷ ಲೇಖನಗಳನ್ನು ಬರೆದಿದ್ದಾರೆ. ಇವರು ರಚಿಸಿದ ಇತಿಹಾಸ ಪುಸ್ತಕಗಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿತ್ತು. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನೂರಕ್ಕೂ ಹೆಚ್ಚು ಪಠ್ಯ ಪುಸ್ತಕವನ್ನು ಇವರು ರಚಿಸಿದ್ದಾರೆ. ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೂರೂರಿನ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸಾಹಿತ್ಯ ಹಾಗೂ ಸಮಾಜ ಸೇವೆಗಾಗಿ ನೂರಕ್ಕೂ ಹೆಚ್ಚು ಸನ್ಮಾನಗಳಿಗೆ ಪಾತ್ರರಾಗಿದ್ದರು. ಇತಿಹಾಸ ವಿಷಯದ ಮೇಲೆ ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜಿನಲ್ಲಿ 300ಕ್ಕೂ ಹೆಚ್ಚು ವಿಶೇಷ ಉಪನ್ಯಾಸವನ್ನು ನೀಡಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement