ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ತೀರ್ಪನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದೆ.
ಮಂಗಳೂರು ಸೇರಿದಂತೆ ಮೂರು ವಿಮಾನ ನಿಲ್ದಾಣಗಳನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡುವ 2019ರ ಸಚಿವ ಸಂಪುಟದ ನಿರ್ಧಾರವನ್ನು ವಜಾ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.
ಬಾರ್‌ ಎಂಡ್‌ ಬೆಂಚ್‌ ವರದಿ ಪ್ರಕಾರ, ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮನವಿಯಲ್ಲಿ ಪ್ರಶ್ನಿಸಲಾಗಿದೆ. ಕೇಂದ್ರದ ಕ್ರಮವು ಕಾನೂನುಬಾಹಿರ, ಸ್ವೇಚ್ಛೆಯಿಂದ ಕೂಡಿದೆ. ಇದು ವಿಮಾನ ನಿಲ್ದಾಣ ಪ್ರಾಧಿಕಾರ ಕಾಯಿದೆ 1994ರ ವ್ಯಾಪ್ತಿ ಮೀರಿದ್ದಾಗಿದೆ ಎಂದು ಹೇಳಲಾಗಿದ್ದು, ಸದರಿ ಮನವಿಯನ್ನು ನಿರ್ದಿಷ್ಟವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಸಲ್ಲಿಸಲಾಗಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಾಯಿದೆಯ ಸೆಕ್ಷನ್‌ 12 ಅನ್ನು ಉಲ್ಲೇಖಿಸಿ, ವಿಮಾನ ನಿಲ್ದಾಣ ಆವರಣವನ್ನು ಗುತ್ತಿಗೆ ನೀಡಬಹುದಾಗಿದೆ. ಆದರೆ, ಇಡೀ ನಿಲ್ದಾಣವನ್ನು ಖಾಸಗಿ ವ್ಯಕ್ತಿಗಳ ನಿರ್ವಹಣೆಗೆ ಒಪ್ಪಿಸಲಾಗಿದೆ ಎಂಬುದು ನಮ್ಮ ವಾದ” ಎಂದರು.
ರನ್‌ ವೇಗಳು, ಟ್ಯಾಕ್ಸಿ ವೇಗಳು ಮತ್ತು ಏರ್‌ಕ್ರಾಫ್ಟ್‌ ಸಂರಕ್ಷಣಾ ಅಗ್ನಿ ಕಟ್ಟಡಗಳನ್ನೂ ಗುತ್ತಿಗೆಗೆ ನೀಡಲಾಗಿದೆ. ಇವೆಲ್ಲವೂ ಏರ್‌ ಟ್ರಾಫಿಕ್‌ ಸೇವೆಯ ಭಾಗವಾಗಿದ್ದು, ಅವುಗಳನ್ನು ಯಾವುದೇ ಕಾರಣಕ್ಕೂ ಗುತ್ತಿಗೆ ನೀಡುವಂತಿಲ್ಲ… ಇದರರ್ಥ ವಿಮಾನಯಾನ ಸೇವೆಗಳ ನಿಯಂತ್ರಣವನ್ನು ಅವರಿಗೆ ಒಪ್ಪಿಸಿದಂತಾಗುತ್ತದೆ, ಇದು ಎಎಐ ಕಾಯಿದೆಗೆ ವಿರುದ್ಧವಾಗಿದೆ. ವಿಮಾನ ನಿಲ್ದಾಣವನ್ನು ಮೂರನೇ ವ್ಯಕ್ತಿಗೆ ನೀಡಲಾಗಿದೆ, ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯ ನೀತಿಗೆ ಅನುಗುಣವಾಗಿಲ್ಲ. ಇದು ಪಾಲುದಾರಿಕೆಯಲ್ಲ ಬದಲಿಗೆ ಅವರಿಗೆ ಒಪ್ಪಿಸುವುದಾಗಿದೆ” ಎಂದು ಆಕ್ಷೇಪಿಸಿದರು.
ಹಾರನಹಳ್ಳಿ ವಾದವನ್ನು ಬಲವಾಗಿ ವಿರೋಧಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ. ಬಿ. ನರಗುಂದ್ ಅವರು ಅರ್ಜಿಯ ನಿರ್ವಹಣೆಯನ್ನು ಪ್ರಶ್ನಿಸಿದರು. ಅರ್ಜಿದಾರ ಒಕ್ಕೂಟದ ಕೇರಳ ವಿಭಾಗವು ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಲಾಗಿದೆ. ಹೀಗಾಗಿ, ಈ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಇದಕ್ಕೆ ಆಕ್ಷೇಪಿಸಿದ ಹಾರನಹಳ್ಳಿ ಅವರು “ಅದಾನಿ ಸಮೂಹಕ್ಕೆ ತಿರುವನಂತಪುರಂನ ವಿಮಾನ ನಿಲ್ದಾಣವನ್ನು ಗುತ್ತಿಗೆ ನೀಡುವುದಕ್ಕೆ ಮಾತ್ರ ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿ ಸೀಮಿತವಾಗಿತ್ತು. ಆ ಆದೇಶವು ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣ ನೀತಿಯನ್ನು ಪ್ರಶ್ನಿಸುವುದನ್ನು ವಿಮುಖಗೊಳಿಸುವುದಿಲ್ಲ” ಎಂದು ಹೇಳಿದರು.
ನರಗುಂದ್ ಅವರು “ದ್ವಿತೀಯ ಮತ್ತು ತೃತೀಯ ದರ್ಜೆ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ನಿಧಿ ಸಂಗ್ರಹಿಸುವ ದೃಷ್ಟಿಯಿಂದ ಹೀಗೆ ಮಾಡಲಾಗಿದ್ದು, ಪ್ರತಿಬಾರಿಯೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಅನುದಾನ ಮೀಸಲಿಡಲು ಕಷ್ಟವಾಗಲಿದೆ. ಇದಕ್ಕಾಗಿ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವ ಮೂಲಕ ಅದರಿಂದ ಸಂಗ್ರಹವಾಗುವ ಹಣವನ್ನು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಎಎಐ ವಿನಿಯೋಗಿಸಲಿದೆ. ಇದರ ಉದ್ದೇಶ ಮಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವುದಷ್ಟೇ ಅಲ್ಲ ಕಲಬುರ್ಗಿ ಮತ್ತು ಬೀದರ್‌ ಇತ್ಯಾದಿ ಕಡೆಯಲ್ಲೂ ವಿಮಾನ ನಿಲ್ದಾಣ ನಿರ್ಮಿಸುವುದಾಗಿದೆ. ಇಲ್ಲಿ ಸಂಗ್ರಹವಾಗುವ ಹಣವನ್ನು ವರ್ಗಾಯಿಸುವ ಮೂಲಕ ಸಮಗ್ರ ದೃಷ್ಟಿಯಿಂದ ಯೋಜನೆ ಜಾರಿಗೊಳಿಸಲಾಗಿದೆ” ಎಂದರು ಎಂದು ವರದಿಯಲ್ಲಿ ಬಾರ್‌ ಎಂಡ್‌ ಬೆಂಚ್‌ ತಿಳಿಸಿದೆ.
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಕೇಂದ್ರ ಸರ್ಕಾರದ ವಾದಕ್ಕೆ ಒಪ್ಪಿಗೆ ಸೂಚಿಸಿತು. ಕಳೆದ ಫೆಬ್ರವರಿಯಲ್ಲಿ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿತ್ತು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement