ಕೋವಿಡ್‌ ಮೂರನೇ ಅಲೆ ನಿಯಂತ್ರಣ: ಲಾಕ್‌ಡೌನ್‌ನಂತಹ ಕಠಿಣ ನಿರ್ಬಂಧ ಸದ್ಯಕ್ಕಿಲ್ಲ, ಎರಡು ವಾರಗಳ ಬಳಿಕ ತೀರ್ಮಾನ- ಸಿಎಂ

ಬೆಂಗಳೂರು: ಕೋವಿಡ್​ ಮೂರನೇ ಅಲೆ ನಿಯಂತ್ರಣ ಸಂಬಂಧ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್​ ತಾಂತ್ರಿಕ ತಜ್ಞರು, ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿದರು.
ರಾಜ್ಯದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆ ಆಗಸ್ಟ್​ 15ರ ಬಳಿಕ ಕಠಿಣ ನಿರ್ಬಂಧ ವಿಧಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಸದ್ಯ ಸೋಂಕು ನಿಯಂತ್ರಣದಲ್ಲಿರುವುದರಿಂದ ಪ್ರಸ್ತುತ ರಾಜ್ಯದಲ್ಲಿರುವ ಈಗಿರುವ ನಿಯಮಗಳನ್ನೇ ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ನೈಟ್​ ಕರ್ಫ್ಯೂ ಹಾಗೂ ಎಂಟು ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿದ್ದು, ಇದನ್ನೆ ಮುಂದುವರೆಸಬೇಕು. ಹೊಸದಾಗಿ ಯಾವುದೇ ನಿಯಮಗಳಿಲ್ಲ. ಈಗ ಜಾರಿಯಲ್ಲಿರುವ ನಿಯಮಗಳನ್ನೇ ಸರಿಯಾಗಿ ಪಾಲಿಸುವಂತೆ ಅವರು ಸೂಚನೆ ನೀಡಿರುವ ಅವರು ಆಗಸ್ಟ್‌ 30ರ ವರೆಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಇದೇ ವೇಳೆ ಎರಡನೇ ಅಲೆಯಲ್ಲಿ ಆದ ಅನಾಹುತ ಮೂರನೇ ಅಲೆಯಲ್ಲಿ ಆಗದಂತೆ ಮುನ್ನೆಚ್ಚರಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು. ಜೊತೆಗೆ ಆಮ್ಲಜನಕ , ಐಸಿಯು ಬೆಡ್, ಅಂಬುಲೆನ್ಸ್ ಕೊರತೆ ಆಗದಂತೆ ಕ್ರಮ ಕೈಗೊಂಡು ಮೂರನೇ ಅಲೆಯ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ.
ಮಕ್ಕಳ ಅಸ್ಪತ್ರೆಗೆ ಹೆಚ್ಚಿನ ಆದ್ಯತೆ ನೀಡುವಂತೆ‌ ಸೂಚನೆ ನೀಡಲಾಗಿದ್ದು, ಜೊತೆಗೆ ಬೇರೆ ರಾಜ್ಯಗಳ ಓಡಾಟದ ಮೇಲೆ ಹೆಚ್ಚಿನ‌ ನಿಗಾ ವಹಿಸಲು ತಿಳಿಸಲಾಗಿದೆ. ಬೇರೆ ರಾಜ್ಯಗಳಿಂದ ಬರುವವರಿಗೆ ಗಡಿ ಪ್ರವೇಶದ ವೇಳೆ ಕೋವಿಡ್​​ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ಮು ಖ್ಯಮಂತ್ರಿಗಳು ಸೂಚಿಸಿದರು.
ಮುಖ್ಯವಾಗಿ ಪಾಸಿಟಿವ್ ದರವಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಆದರೆ ಸದ್ಯಕ್ಕೆ ಲಾಕ್ ಡೌನ್ ನಂತಹ ಕಠಿಣ ಕ್ರಮ ಜಾರಿ ಬೇಡ ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯಬಿದ್ದರೆ ಮಾತ್ರ ವಿಕೇಂಡ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ನಿರ್ಧರಿಸಲಾಗಿದೆ.
ಹಬ್ಬಗಳ ಸಾಲುಸಾಲು ಬರುವ ಕಾರಣ ಹಬ್ಬದ ದಿನದಲ್ಲಿ ಜನ ಗುಂಪಾಗಿ ಸೇರದಂತೆ ಎಚ್ಚರವಹಿಸಬೇಕು ಸೂಚಿಸಲಾಯಿತು. ಹಬ್ಬಗಳ ಆಚರಣೆ ಈ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿದೆ. ರಾಜ್ಯದಲ್ಲಿ ಕೋವಿಡ್​ ಪರೀಕ್ಷಾ ಸಂಖ್ಯೆಯನ್ನು ಹೆಚ್ಚು ಹೆಚ್ಚು ಮಾಡಿಸಬೇಕು ಜೊತೆಗೆ ಲಸಿಕೆ ವಿತರಣೆಗೂ ವೇಗ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement